ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿದ್ದು, ಒಬ್ಬೊಬ್ಬರೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರು ಪಕ್ಷವನ್ನು ತೊರೆದು ಬಿಜೆಪಿಯತ್ತ ವಾಲುತ್ತಿದ್ದಾರೆ.
ಇದೀಗ ಟಿಎಂಸಿ ನಾಯಕ ದಿನೇಶ್ ಬಜಾಜ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಟಿಎಂಸಿ ನಿನ್ನೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಲಿಸ್ಟ್ನಲ್ಲಿ ತಮ್ಮ ಹೆಸರಿಲ್ಲದ ಕಾರಣ ಬಜಾಜ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ದೀದಿಗೆ ಸಂದೇಶ
ರಾಜೀನಾಮೆ ನೀಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಂದೇಶ ನೀಡಿರುವ ದಿನೇಶ್ ಬಜಾಜ್, ತೃಣಮೂಲ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಂದ ನನ್ನನ್ನು ಮುಕ್ತಗೊಳಿಸಿ ರಾಜೀನಾಮೆಯನ್ನು ಸ್ವೀಕರಿಸಿ. 2006 ರಿಂದ 2011 ರವರೆಗೆ ಶಾಸಕನಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ಮಮತಾ ಬ್ಯಾನರ್ಜಿ ಜೊತೆ ನನಗೆ ಉತ್ತಮ ಬಾಂಧವ್ಯವಿತ್ತು. ಆದರೆ ಈ ಬಾರಿ ಟಿಎಂಸಿ ನನಗೊಂದು ಅವಕಾಶ ನೀಡತ್ತೆ ಅಂತಾ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.
ನಾನು ಬಿಜೆಪಿಗೆ ಸೇರುತ್ತೇನೆ. ಬಿಜೆಪಿ ನನ್ನನ್ನು ಚುನಾವಣೆಗೆ ತನ್ನ ಅಭ್ಯರ್ಥಿ ಎಂದು ಘೋಷಿಸಿದರೆ, ಬಿಜೆಪಿ ಗೆಲುವು ಖಚಿತ. ಜನರಿಗೆ ನನ್ನ ಬಗ್ಗೆ ಗೊತ್ತು, ನಾನು ಮಾಡಿದ ಕೆಲಸಕ್ಕಾಗಿ ನನಗೆ ಮತ ಹಾಕುತ್ತಾರೆ ಎಂದು ಬಜಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೀದಿಗೆ ಕೈಕೊಟ್ಟು ಬಿಜೆಪಿ ಸೇರಿದ ಟಿಎಂಸಿ ಸಂಸದ ದಿನೇಶ್ ತ್ರಿವೇದಿ
ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನಿನ್ನೆಯಷ್ಟೇ ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ನಂದಿಗ್ರಾಮ ಕ್ಷೇತ್ರದಿಂದ ಸೌಮೆಂದು ಅಧಿಕಾರಿ ವಿರುದ್ಧ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಟಿಎಂಸಿ ಸಚಿವನಾಗಿದ್ದ ಸುವೇಂದು ಅಧಿಕಾರಿ, ಅವರ ಸಹೋದರ ಸೌಮೆಂದು ಅಧಿಕಾರಿ, ದಿನೇಶ್ ತ್ರಿವೇದಿ ಸೇರಿದಂತೆ ಅನೇಕ ಟಿಎಂಸಿ ಮುಖಂಡರು ಹಾಗೂ ಶಾಸಕರು ಈಗಾಗಲೇ ಮಮತಾಗೆ ಕೈಕೊಟ್ಟು ಬಿಜೆಪಿ ಸೇರಿದ್ದಾರೆ. ಇಂದು ಬೆಳಗ್ಗೆಯಷ್ಟೇ ದಿನೇಶ್ ತ್ರಿವೇದಿ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.