ಗಯಾ(ಬಿಹಾರ): ಮನೆ, ದೇವಸ್ಥಾನಗಳಲ್ಲಿ ಮದುವೆ ಸಾಮಾನ್ಯ. ಅದು ಬಿಟ್ಟು ಬೇರೆ ಕಡೆಗಳಲ್ಲಿ ಮದುವೆಯಾಗುವವರೂ ಇದ್ದಾರೆ. ಅದು ಕೂಡ ಬೆರಳೆಣಿಕೆಯಷ್ಟೇ. ಆದರೆ, ಇಲ್ಲೊಬ್ಬಳು ವಧು ಆಸ್ಪತ್ರೆಯಲ್ಲೇ ವರನಿಗೆ ಕೊರಳೊಡ್ಡಿದ್ದಾಳೆ. ಸಿನಿಮಾ, ಧಾರಾವಾಹಿ ಕಥೆಗಳನ್ನು ಮೀರಿಸುವಂತಹ ವಿಶಿಷ್ಟ ಮದುವೆ ಇದಾಗಿದೆ. ಈ ವಿವಾಹಕ್ಕೆ ಕಾರಣ ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ.
ಬಿಹಾರದ ಗಯಾ ಎಂಬಲ್ಲಿ ಸಿನಿಮಾ ರೀತಿಯ ಸೆಂಟಿಮೆಂಟಲ್ ಮದುವೆಯೊಂದು ನಡೆದಿದೆ. ಆಸ್ಪತ್ರೆಯ ಐಸಿಯುನಲ್ಲಿ ವರ ವಧುವಿಗೆ ತಾಳಿ ಕಟ್ಟಿ ಸತಿಪತಿಗಳಾಗಿದ್ದಾರೆ. ಈ ವೇಳೆ ವಧು-ವರರ ಸಂಬಂಧಿಕರು ಮತ್ತು ವೈದ್ಯರು ಹಾಜರಿದ್ದು, ಮದುವೆಗೆ ಸಾಕ್ಷಿಯಾಗಿದ್ದಾರೆ.
ಗಯಾ ಜಿಲ್ಲೆಯ ಗುರಾರು ಬ್ಲಾಕ್ನ ಬಾಳಿ ಗ್ರಾಮದ ಲಾಲನ್ ಕುಮಾರ್ ಅವರ ಪತ್ನಿ ಪೂನಂ ವರ್ಮಾ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದರು. ದಿನ ಹೋದಂತೆ ಅವರ ಆರೋಗ್ಯ ಮತ್ತಷ್ಟು ಹದೆಗೆಡಲು ಪ್ರಾರಂಭಿಸಿತು. ಬಳಿಕ ಅವರನ್ನು ಗಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿತ್ತು. ಯಾವಾಗ ಬೇಕಾದರೂ ಆಕೆ ಸಾಯಬಹುದು. ನೀವೇ ಅವರನ್ನು ನೋಡಿಕೊಳ್ಳಿ ಎಂದ ವೈದ್ಯರು ತಮ್ಮ ಪ್ರಯತ್ನವನ್ನೆಲ್ಲ ಮಾಡಿ ಕೊನೆಗೆ ಕೈ ಚೆಲ್ಲಿ ಕುಳಿತು ಬಿಟ್ಟಿದ್ದಾರೆ.
ಇದನ್ನೂ ಓದಿ: ಡಚ್ ಹುಡುಗಿಯನ್ನು ವರಿಸಿದ ಬಿಹಾರಿ ಹುಡುಗ.. ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ Travel Couple
ಮಗಳ ಮದುವೆಯೇ ಕೊನೆ ಆಸೆ: ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ಪೂನಂ ವರ್ಮಾ ಅವರಿಗೆ ಮಗಳ ಮದುವೆ ನೋಡಬೇಕು ಎಂಬ ಕೊನೆ ಆಸೆ ಇತ್ತು. ನನ್ನ ಕಣ್ಣೆದುರೇ ಅವಳ ಮದುವೆಯಾಗಬೇಕು. ಈಗಲೇ ನನ್ನ ಮಗಳು ಚಾಂದಿನಿ ಕುಮಾರಿಯ ಮದುವೆ ಮಾಡಿಸಿ. ಅವಳ ಮದುವೆ ನೋಡಿಯೇ ನಾನು ಸಾಯಬೇಕೆಂದುಕೊಂಡಿದ್ದೇನೆ ಎಂದು ತನ್ನ ಕುಟುಂಬಸ್ಥರಲ್ಲಿ ಮನವಿ ಮಾಡಿಕೊಂಡರು.
ವಾಸ್ತವದಲ್ಲಿ ಅವರ ಮಗಳ ನಿಶ್ಚಿತಾರ್ಥವು ಇಂದು(ಡಿಸೆಂಬರ್ 26) ನಡೆಯಲಿತ್ತು. ಆದರೆ, ಅದಕ್ಕೂ ಮೊದಲು ಅವರ ಆರೋಗ್ಯವೇ ಹದೆಗೆಟ್ಟಿತು. ಈ ಕಾರಣಕ್ಕಾಗಿ ಆಕೆಯ ಮದುವೆ ಮಾಡಿಸುವುದೇ ಅನಿವಾರ್ಯವಾಯಿತು.
ಮದುವೆಯಾದ ಎರಡು ಗಂಟೆಯಲ್ಲೇ ತಾಯಿ ಸಾವು: ಪೂನಂ ವರ್ಮಾ ಮುಖದಲ್ಲಿ ನಗು ತರಿಸಲು ಕೊನೆಗೂ ಮದುವೆಯನ್ನು ಕುಟುಂಬಸ್ಥರು ಆಯೊಜನೆ ಮಾಡಿಯೇ ಬಿಟ್ಟರು. ಕೊನೆ ಆಸೆ ಎಂಬಂತೆ ಮಗಳು ಚಾಂದಿನಿಯನ್ನು ವಧುವಿನ ಉಡುಪಿನಲ್ಲಿ ಅಲಂಕರಿಸಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸುಮಿತ್ ಗೌರವ್ ಜೊತೆ ಮದುವೆ ಮಾಡಿಸಿಬಿಟ್ಟರು. ಮಗಳ ಮದುವೆ ತಮ್ಮ ಸಮ್ಮುಖದಲ್ಲೇ ನಡೆದದ್ದು ಆಕೆಗೆ ಹೇಳ ತೀರದ ಸಂತೋಷವನ್ನೇ ತಂದು ಕೊಟ್ಟಿತು. ಆ ಕ್ಷಣ ತನ್ನ ತಾಯಿಯ ಕಣ್ಣಲ್ಲಿದ್ದ ಸಂತಸ ಕಂಡ ಚಾಂದಿನಿ ಭಾವುಕರಾದರು. ನಂತರ ವಧು- ವರರಿಬ್ಬರು ಪೂನಂ ಅವರ ಆಶೀರ್ವಾದ ಪಡೆದುಕೊಂಡರು. ಇದಾದ ಎರಡು ಗಂಟೆಯಲ್ಲೇ ಪೂನಂ ಇಹಲೋಕ ತ್ಯಜಿಸಿದರು. ಮದುವೆ ಸಂತಸದಲ್ಲಿರಬೇಕಾದ ಕುಟುಂಬಕ್ಕೆ ಶೋಕದ ಛಾಯೆ ಆವರಿಸಿತು.
"ನನ್ನ ತಾಯಿ ಮಗಧ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಎನ್ಎಂ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೊರೊನಾ ಅವಧಿಯಿಂದಲೂ ನಿರಂತರವಾಗಿ ಹೃದ್ರೋಗದಿಂದ ಬಳಲುತ್ತಿದ್ದರು. ಆದರೆ, ಇಷ್ಟು ಬೇಗ ಆಕೆಯನ್ನು ಕಳೆದುಕೊಳ್ಳುತ್ತೇನೆ ಎಂದು ಉಹಿಸಿರಲಿಲ್ಲ. ಆಕೆಯ ಕೊನೆ ಆಸೆ ನನ್ನ ಮದುವೆಯಾಗಿತ್ತು. ಅವಳ ಆಸೆಯನ್ನು ಪೂರೈಸಲೆಂದೇ ನನಗೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಮದುವೆಯಾಗಿದ್ದೇನೆ. ಅವಳು ಸಾಯುವಾಗ ಕಣ್ಣಲ್ಲಿದ್ದ ಸಂತೋಷ ಕಂಡ ನನಗೆ ಅವಳ ಆಸೆ ಪೂರೈಸಿದ ಸಂತೃಪ್ತಿಯಿದೆ ಎಂದ ವಧು ಚಾಂದಿನಿ ಕುಮಾರಿ, ತಾಯಿಯನ್ನು ನೆನೆಯುತ್ತಾ ಭಾವುಕರಾದರು.
ಇದನ್ನೂ ಓದಿ: ಜರ್ಮನಿ ಹುಡುಗಿ ರಾಜಸ್ಥಾನದ ಹುಡುಗ: ಹಿಂದೂ ಸಂಪ್ರದಾಯದಂತೆ ಗಟ್ಟಿಮೇಳ.. VIDEO