ಹನಮಕೊಂಡ(ತೆಲಂಗಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಪ್ರವಾಸವನ್ನು ಆರಂಭಿಸಿದ್ದು, ಮುಂದಿನ ಚುನಾವಣೆಗೆ ಪಕ್ಷದ ಕಾರ್ಯತಂತ್ರವನ್ನು ಘೋಷಣೆ ಮಾಡಿದ್ದಾರೆ. ಬಿಜೆಪಿ ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎರಡನ್ನೂ ಕಾಂಗ್ರೆಸ್ ಪಕ್ಷ ಎದುರಿಸುತ್ತದೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಶಂಶಾಬಾದ್ ಏರ್‌ಪೋರ್ಟ್‌ಗೆ ಬಂದಿಳಿದ ನಂತರ ನೇರವಾಗಿ ಹೈದರಾಬಾದ್‌ಗೆ ಬಂದ ರಾಹುಲ್ ಗಾಂಧಿ, ನಂತರ ಹನಮಕೊಂಡದ ಗಾಬ್ರಿಯಾಲ್ ಶಾಲೆಯ ಮೈದಾನಕ್ಕೆ ತೆರಳಿ, ಸಾರ್ವಜನಿಕ ಕಾರ್ಯಕ್ರಮದ ಭಾಷಣದಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದಲ್ಲಿ ಒಬ್ಬ ವ್ಯಕ್ತಿ ಸಾವಿರಾರು ಕೋಟಿ ಭ್ರಷ್ಟಾಚಾರ ಎಸಗಿದ್ದಾನೆ. ಆ ವ್ಯಕ್ತಿ ಜನರಿಗೆ ಗೊತ್ತಿದೆ. ಕಾಂಗ್ರೆಸ್‌ಗೆ ಮೋಸಗಾರರು ಮತ್ತು ಮೋಸ ಮಾಡುವ ಪಕ್ಷಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಮೈತ್ರಿ ಬಗ್ಗೆ ಮಾತನಾಡುವವರನ್ನು ಗಡಿಪಾರು ಮಾಡುತ್ತೇವೆ. ಟಿಆರ್‌ಎಸ್ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿವೆ. ನಾವು ನೇರವಾಗಿ ಟಿಆರ್‌ಎಸ್ ಮತ್ತು ಬಿಜೆಪಿಯೊಂದಿಗೆ ಹೋರಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದರ ಜೊತೆಗೆ ತೆಲಂಗಾಣ ಬಹಳ ಸರಳವಾಗಿ ರೂಪುಗೊಂಡಿಲ್ಲ. ಇದು ಬಹಳಷ್ಟು ಜನರ ತ್ಯಾಗದಿಂದ ರೂಪುಗೊಂಡಿದೆ. ಇದು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕಾಗಿ ರೂಪುಗೊಂಡಿಲ್ಲ. ತೆಲಂಗಾಣ ಜನರ ಕನಸುಗಳನ್ನು ಟಿಆರ್‌ಎಸ್ ಸರ್ಕಾರ ಈಡೇರಿಸಲಿಲ್ಲ. ರೈತರು ಮತ್ತು ನಿರುದ್ಯೋಗಿಗಳ ಆತ್ಮಹತ್ಯೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಲಿದೆ ಎಂದು ತಿಳಿದಿದ್ದರೂ ಸಹ ತೆಲಂಗಾಣ ರಚನೆಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾಗವಹಿಸಿದ್ದ ಸಭೆಯಲ್ಲಿ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಸಂಸದರಾದ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ, ಶಾಸಕಿ ಸೀತಕ್ಕ ಸೇರಿದಂತೆ ತೆಲಂಗಾಣ ಕಾಂಗ್ರೆಸ್‌ನ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.