ನವದೆಹಲಿ: ಕೇಂದ್ರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ಆರಂಭವಾದ ರೈತರ ಪ್ರತಿಭಟನೆ 100 ದಿನಗಳಿಗೆ ಕಾಲಿಟ್ಟ ಹಿನ್ನೆಲೆ ರೈತರು 135 ಕಿ.ಮೀ ಉದ್ದದ ಕೆಎಂಪಿ ಎಕ್ಸ್‌ಪ್ರೆಸ್‌ವೇ ಯನ್ನು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ನಿರ್ಬಂಧಿಸಿದ್ದಾರೆ.
ರೈತ ಮುಖಂಡರ ಪ್ರಕಾರ, ಶನಿವಾರ ತನ್ನ 100 ನೇ ದಿನವನ್ನು ಪೂರ್ಣಗೊಳಿಸಲಿರುವ ರೈತರ ಆಂದೋಲನವು ಪ್ರತಿಭಟನೆಯ ತಕ್ಷಣದ ವ್ಯಾಪ್ತಿ ಮೀರಿ ಹೆಚ್ಚಿನದನ್ನು ಸಾಧಿಸಿದೆ. ಇದು ರೈತರಲ್ಲಿ ರಾಷ್ಟ್ರವ್ಯಾಪಿ ಐಕ್ಯತೆಯನ್ನು ಹುಟ್ಟುಹಾಕಿದೆ ಮತ್ತು ಕೃಷಿಯಲ್ಲಿ ಮಹಿಳೆಯರ ಕೊಡುಗೆ ಗುರುತಿಸಿದೆ.
ಟಿಕಾಯತ್: ಪ್ರತಿಭಟನೆಯ ಹಿಂದಿರುವ ಶಕ್ತಿ:
ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ರಾಕೇಶ್ ಟಿಕಾಯತ್ ಅವರು ಪ್ರತಿಭಟನೆ ಅಗತ್ಯವಿರುವವರೆಗೂ ಮುಂದುವರಿಸಲು ಸಿದ್ಧರಾಗಿದ್ದೇವೆ ಎಂದಿದ್ದಾರೆ. ಸರ್ಕಾರವು ನಮ್ಮ ಮಾತುಗಳನ್ನು ಆಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ರೈತ ಚಳವಳಿಯ ಮುಂಚೂಣಿಯಲ್ಲಿರುವ ನಾಯಕರಲ್ಲಿ ಒಬ್ಬರಾದ ಟಿಕಾಯತ್ ಒತ್ತಿ ಹೇಳಿದ್ದಾರೆ. ಸರ್ಕಾರ ಮತ್ತು ರೈತ ಸಂಘಗಳ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ಪ್ರತಿಭಟನಾ ಸ್ಥಳದಿಂದ ಅಲುಗಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಕೇಂದ್ರವು ಸಮರ್ಥಿಸಿಕೊಂಡಿದೆ, ಅದು ಮಧ್ಯವರ್ತಿಗಳ ಹಾವಳಿ ತಡೆಯುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವ ಭಾಗದಲ್ಲಾದರೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದಿದೆ ಕೇಂದ್ರ ಸರ್ಕಾರ. ಆದರೆ, ಈ ಹೊಸ ಕಾನೂನುಗಳು, ಕನಿಷ್ಠ ಬೆಂಬಲ ಬೆಲೆಯನ್ನು ಇಲ್ಲವಾಗಿಸುತ್ತವೆ 'ಮಂಡಿ' ಮಾರುಕಟ್ಟೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತವೆ ಎಂದು ರೈತರು ಆತಂಕ ಹೊರಹಾಕಿದ್ದಾರೆ.
ಯೋಗೇಂದ್ರ ಯಾದವ್ ಏನು ಹೇಳುತ್ತಾರೆ ?
ಈ ಪ್ರತಿಭಟನೆಯು ಕೃಷಿ ಸಮುದಾಯವನ್ನು ದೇಶದ ರಾಜಕೀಯ ಮೈದಾನದಲ್ಲಿ ಹೇಗೆ ಗಮನಾರ್ಹ ಆಟಗಾರನನ್ನಾಗಿ ಮಾಡಿದೆ ಎಂಬುದರ ಕುರಿತು ಮಾತನಾಡಿದ ಸ್ವರಾಜ್ ಭಾರತದ ಯೋಗೇಂದ್ರ ಯಾದವ್, "ಈ ಆಂದೋಲನವು ರೈತರನ್ನು ಈ ದೇಶದ ರಾಜಕೀಯ ಭೂಪರದೆಯ ಮೇಲೆ ಮರಳಿ ತಂದಿದೆ. ಪ್ರತಿಯೊಬ್ಬ ರಾಜಕಾರಣಿಗೂ ರೈತರನ್ನು ಎದುರು ಹಾಕಿಕೊಳ್ಳಬಾರದೆಂಬ ಪಾಠ ಕಲಿಸಿದೆ.
"ಜನರು ರೈತರನ್ನು ಲಘುವಾಗಿ ಪರಿಗಣಿಸುತ್ತಿದ್ದರು. ಆದರೆ, ಈ ಆಂದೋಲನವು ರೈತರೊಂದಿಗೆ ಮುಖಾಮುಖಿಯಾಗುವುದು ದುಬಾರಿ ವ್ಯವಹಾರವಾಗಿದೆ ಎಂದು ತೋರಿಸಿದೆ" ಎಂದು ಹೇಳಿದ್ರು."ಇದು ಹಿಂದೆಂದಿಗಿಂತಲೂ ಹೆಚ್ಚು ರೈತರನ್ನು ಒಂದುಗೂಡಿಸಿದೆ. ಹರಿಯಾಣ ಮತ್ತು ಪಂಜಾಬ್ ರೈತರು ಒಗ್ಗೂಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ರೈತರು ಈ ಪ್ರತಿಭಟನೆಯಲ್ಲಿ ಒಂದಾಗಿದ್ದಾರೆ. ಗುಜಾರ್ ಮತ್ತು ಮೀನಾಗಳು ರಾಜಸ್ಥಾನದಲ್ಲಿ ಒಂದಾಗಿದ್ದಾರೆ ಎಂದು ಯಾದವ್ ಹೇಳಿದರು.
ಕೆಎಂಪಿ ಎಕ್ಸ್‌ಪ್ರೆಸ್‌ವೇ ದಿಗ್ಬಂಧನ: ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ, ರೈತರ ಭರವಸೆ:
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವು ಶನಿವಾರ ತನ್ನ ನೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ, ರೈತ ಸಂಘಗಳ ಮುಖಂಡರು ತಮ್ಮ ಚಳವಳಿ ಮುಗಿದಿಲ್ಲ ಮತ್ತು ಅವರು "ಬಲವಾಗಿ ಸಾಗುತ್ತಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ.
ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ನೋಂದಾಯಿಸಲು ಕಪ್ಪು ಪಟ್ಟಿ ಧರಿಸುವಂತೆ ವಿನಂತಿಸಿದೆ. ಹಾಗೂ ಐದು ಗಂಟೆಗಳ ದಿಗ್ಬಂಧನವು ಶಾಂತಿಯುತವಾಗಿರುತ್ತದೆ ಎಂದು ರೈತರು ಹೇಳಿದ್ದಾರೆ.
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುವವರು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುತ್ತಾರೆ. ಇದಲ್ಲದೇ, ಗಾಜಿಪುರ ಮತ್ತು ಟಿಕ್ರಿ ಗಡಿಯ ರೈತರು ಕ್ರಮವಾಗಿ ದಸ್ನಾ ಮತ್ತು ಬಹದ್ದೂರ್ ಟೋಲ್ ಪ್ಲಾಜಾವನ್ನು ನಿರ್ಬಂಧಿಸುತ್ತಾರೆ. ಶಹಜಹಾನಪುರ ಗಡಿಯಲ್ಲಿ ಕುಳಿತವರು ಗುರುಗ್ರಾಮ್-ಮನೇಸರ್ ಅನ್ನು ಮುಟ್ಟುವ ಕೆಎಂಪಿ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿರ್ಬಂಧಿಸಿದ್ದಾರೆ.ಟೋಲ್ ಪ್ಲಾಜಾಗಳನ್ನು ಶುಲ್ಕವನ್ನು ಸಂಗ್ರಹಿಸುವುದರಿಂದ ಮುಕ್ತಗೊಳಿಸುವುದು ಅವರ ಕ್ರಿಯೆಯ ಯೋಜನೆಯಲ್ಲಿ ಸೇರಿದೆ.
ಘಾಜಿಪುರ ಗಡಿಯಲ್ಲಿ ಬೀಡುಬಿಟ್ಟಿರುವ ಭಾರತೀಯ ಕಿಸಾನ್ ಒಕ್ಕೂಟದ ಉತ್ತರ ಪ್ರದೇಶದ ಅಧ್ಯಕ್ಷ ರಾಜವೀರ್ ಸಿಂಗ್ ಜಾದೌನ್, "ಈ ಟೋಲ್ ಪ್ಲಾಜಾಗಳನ್ನು ಶಾಂತಿಯುತವಾಗಿ ನಿರ್ಬಂಧಿಸಲಾಗುವುದು ಮತ್ತು ಈ ರಸ್ತೆಗಳಲ್ಲಿ ಸಂಚರಿಸುವವರಿಗೆ ತೊಂದರೆಯಾಗುವುದಿಲ್ಲ. ದಾರಿಹೋಕರಿಗೆ ನಾವು ನೀರನ್ನು ಇಡುತ್ತೇವೆ ಎಂದು ತಿಳಿಸಿದ್ದಾರೆ.
"ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಅಥವಾ ವಿದೇಶಿ ಪ್ರವಾಸಿಗರು ಹಾಗೂ, ತುರ್ತು ವಾಹನಗಳನ್ನು ನಾವು ತಡೆಯುವುದಿಲ್ಲ, ಮಿಲಿಟರಿ ವಾಹನಗಳನ್ನು ಸಹ ನಿಲ್ಲಿಸಲಾಗುವುದಿಲ್ಲ" ಎಂದು ಅವರು ಹೇಳಿದರು. ಸಾಮಾನ್ಯ ಜನರು ರೈತ ಆಂದೋಲನವನ್ನು ಬೆಂಬಲಿಸಲು ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸಲು ಮನೆ ಮತ್ತು ಕಚೇರಿಗಳಲ್ಲಿ ಕಪ್ಪು ಧ್ವಜಗಳನ್ನು ಇಡುವಂತೆ ಕಿಸಾನ್ ಮೋರ್ಚಾ ಕೋರಿದೆ.
ರೈತ ಚಳವಳಿಯ ಆರಂಭ ಹೇಗಿತ್ತು?
ಆಯಾ ಪ್ರದೇಶಗಳಲ್ಲಿ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ನಂತರ, ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ 'ದೆಹಲಿ ಚಲೋ' ಮೆರವಣಿಗೆಯೊಂದಿಗೆ ರಾಷ್ಟ್ರ ರಾಜಧಾನಿಯತ್ತ ತೆರಳಿದರು ಮತ್ತು ಕಳೆದ ವರ್ಷ ನವೆಂಬರ್ 26 ರಂದು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಕ್ಯಾಂಪ್ ಮಾಡಿದರು. ಕೆಲವು ದಿನಗಳ ನಂತರ ಘಾಜಿಪುರ ಗಡಿಯಲ್ಲಿ ಶಿಬಿರವನ್ನು ಸ್ಥಾಪಿಸಿದ ಯುಪಿಯ ರೈತರು ಅವರನ್ನು ಸೇರಿಕೊಂಡರು. ನವೆಂಬರ್ 26 ರಿಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ಬೀಡು ಬಿಟ್ಟರು.
ಈ 100 ದಿನಗಳಲ್ಲಿ, ರೈತರು ಅತೀ ಕೆಟ್ಟ ಹವಾಮಾನದ ಜೊತೆ ಹೋರಾಡಿದ್ದಾರೆ. ಆದರೆ, ಅವರ ಬೇಡಿಕೆ ದೃಢವಾಗಿ ಉಳಿದಿದೆ. ಕಾನೂನುಗಳು ಎಂಎಸ್ಪಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಹೇಳುತ್ತಾರೆ. ಆದಾಗ್ಯೂ, ಕೇಂದ್ರವು ಈ ಕಾನೂನುಗಳನ್ನು ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ, ದೀರ್ಘಕಾಲ ಅಗತ್ಯವಿರುವ ಸುಧಾರಣೆಗಳು ಎಂದು ಬಣ್ಣಿಸಿದೆ ಮತ್ತು ಅವು ಮಾರುಕಟ್ಟೆ ಹೂಡಿಕೆ ಹೆಚ್ಚಿಸುತ್ತವೆ ಎಂದು ಹೇಳಿದೆ.
ಒಟ್ಟಿನಲ್ಲಿ ಅನ್ನದಾತನೇ ಬೇಡ ಎನ್ನುತ್ತಿರುವ ಕಾನೂನನ್ನು ಸರ್ಕಾರ ಬಲವಂತವಾಗಿ ತರಹೊರಟಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. 100 ದಿನಗಳ ನಂತರವಾದರೂ ಈ ಪ್ರತಿಭಟನೆ ಅಂತ್ಯಕಾಣಲಿದೆಯೇ? ಸರ್ಕಾರ ಹಾಗೂ ರೈತರ ನಡುವಿನ ಈ ಹೋರಾಟದಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕು.