ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಮತಾಂಧರು ನಡೆಸಿದ ಹಿಂದೂ ಟೈಲರ್‌ವೊಬ್ಬರ ಭೀಕರ ಶಿರಚ್ಛೇದವನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. "ಇಂತಹ ಘಟನೆ ಕೇವಲ ರಾಜಸ್ಥಾನ ಮಾತ್ರವಲ್ಲ ಉತ್ತರ ಪ್ರದೇಶ, ಅಸ್ಸೋಂ ಸೇರಿದಂತೆ ಅನೇಕ ಕಡೆ ನಡೆಯುತ್ತಿರುವುದಾಗಿ ವರದಿಯಾಗಿವೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮೌನ ಮುರಿಯಬೇಕು" ಎಂದು ಒತ್ತಾಯಿಸಿದ್ದಾರೆ.
"ರಾಜಸ್ಥಾನ ಸರ್ಕಾರ ಕ್ಷಿಪ್ರ ಕ್ರಮ ಕೈಗೊಂಡು ಕೇವಲ 2-3 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದೆ. ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಯಾಗಿ ಕಾಪಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇಂತಹ ಹೇಯ ಕೃತ್ಯಗಳಲ್ಲಿ ಜನರು ತೊಡಗಬಾರದು" ಎಂದು ಪ್ರಧಾನಿ ಮನವಿ ಮಾಡಬೇಕು ಎಂದಿರುವ ಖರ್ಗೆ, "ಪ್ರಚೋದನಕಾರಿ ದ್ವೇಷದ ಭಾಷಣ ಮಾಡಬಾರದು" ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ರನ ಜೊತೆಗೆ ಮಗಳಿಗೂ ಜವಾಬ್ದಾರಿ; ರಿಲಯನ್ಸ್ ರಿಟೇಲ್‌ನ ಚೇರ್ಮನ್ ಆಗಿ ಇಶಾ ಅಂಬಾನಿ ನೇಮಕ
ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಟೈಲರ್ ಕನ್ಹಯ್ಯ ಲಾಲ್ ಎಂಬವರನ್ನು ನಿನ್ನೆ ಇಬ್ಬರು ಮುಸ್ಲಿಂ ಯುವಕರು ಶಿರಚ್ಛೇದಿಸಿ ದಾರುಣವಾಗಿ ಹತ್ಯೆ ಮಾಡಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವನ್ನು ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೈವಾಡವಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಟ್ವೀಟ್ ಮಾಡಿದೆ.