ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಡಿತರ ಚೀಟಿಯಲ್ಲಿ 'ದತ್ತಾ' ಎಂಬ ಹೆಸರಿನ ಬದಲಿಗೆ 'ಕುತ್ತಾ' ಎಂದು ಮುದ್ರಿಸಿದ ಅಧಿಕಾರಿಗಳ ಬೇಜವಾಬ್ದಾರಿ ಪ್ರಕರಣ ಪಶ್ವಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಇದರಿಂದ ವ್ಯಕ್ತಿಯೊಬ್ಬರು ಸರ್ಕಾರಿ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳಿ ತನ್ನ ಆಕ್ರೋಶ ಹೊರಹಾಕಿದ್ದಾರೆ.
ಬಂಕುರಾ ಜಿಲ್ಲೆಯ ಕೇಶಿಕೋಲ್ ಗ್ರಾಮದ ನಿವಾಸಿಯಾದ ಶ್ರೀಕಂತಿ ದತ್ತಾ ಎಂಬುವವರ ಹೆಸರನ್ನು ಪಡಿತರ ಚೀಟಿಯಲ್ಲಿ ಮುದ್ರಣದ ವೇಳೆ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ದತ್ತಾ ಬದಲಿಗೆ ಕುತ್ತಾ (ಹಿಂದಿಯ ಪದ) ಎಂದರೆ ನಾಯಿ ಎಂದು ಮುದ್ರಿಸಲಾಗಿತ್ತು. ಈ ಅಧಿಕೃತ ದಾಖಲೆಯಲ್ಲಿ ತನ್ನ ಹೆಸರನ್ನು ತಿದ್ದುಪಡಿ ಮಾಡಲು ಮೂರು ಬಾರಿ ಶ್ರೀಕಾಂತಿ ದತ್ತಾ ಅರ್ಜಿ ಸಲ್ಲಿಸಿದ್ದರು. ಆದರೂ, ಹೆಸರು ತಿದ್ದುಪಡಿ ಆಗಿರಲಿಲ್ಲ.
ಇದರಿಂದ ರೋಸಿ ಹೋದ ಶ್ರೀಕಂತಿ ದತ್ತಾ ತಾವಿದ್ದ ಪ್ರದೇಶದಿಂದ ಜಂಟಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ)ಯ ವಾಹನವು ಹಾದು ಹೋಗುತ್ತಿದ್ದಾಗ ನಾಯಿಯಂತೆ ಬೊಗಳಗಿದ್ದಾರೆ. ಅಧಿಕಾರಿ ಕುಳಿತಿದ್ದ ಕಾರಿನ ಕಿಟಕಿಯ ಪಕ್ಕದಲ್ಲೇ ಹೋಗಿ ಬೊಗಳಲು ಪ್ರಾರಂಭಿಸಿದ್ದಾರೆ. ಇದರ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ.
ಒಂದು ವರ್ಷದಿಂದ ಅಲೆದಾಟ: 'ನಾನು ಒಂದು ವರ್ಷದಿಂದ ಪಡಿತರ ಚೀಟಿಯಲ್ಲಿ ನನ್ನ ಹೆಸರನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಪ್ರತಿ ಬಾರಿ ನನ್ನ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಆದರೂ, ಸರಿಪಡಿಸದ ಕಾರಣ ನಾನು ನಿರಾಶೆಗೊಂಡಿದ್ದೇನೆ. ಹೀಗಾಗಿ ಪಡಿತರ ಚೀಟಿಯಲ್ಲಿ ನನ್ನನ್ನು ಚಿತ್ರಿಸಿದ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೆ' ಎಂದು ಶ್ರೀಕಾಂತಿ ದತ್ತಾ 'ಈಟಿವಿ ಭಾರತ್'ಗೆ ತಾವು ಅನುಭವಿಸಿದ ಯಾತನೆ ಬಗ್ಗೆ ವಿವರಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾನ್ಯ ಜನರಿಗೆ ಮೂಲಭೂತ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಎಂಬ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಆದರೆ, ನನ್ನ ಪಡಿತರ ಚೀಟಿಯಲ್ಲಿ ಶ್ರೀಕಾಂತ ಮಂಡಲ್ ಎಂದು ಆರಂಭದಲ್ಲಿ ಮುದ್ರಿಸಲಾಗಿತ್ತು. ನಾನು ನಿಮ್ಮ ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕ್ರಮಕ್ಕೆ ಕ್ಯಾಂಪ್ನಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೆ ಎಂದು ಹೇಳಿದರು.
ಆದರೆ, ಮುಂದಿನ ಬಾರಿ ಶ್ರೀಕಾಂತ ದತ್ತಾ ಎಂದು ಮುದ್ರಿಸಲಾಯಿತು. ನಾನು ಶ್ರೀಕಾಂತ ಅಲ್ಲ, ಶ್ರೀಕಂತಿ ಅಂತ ಮತ್ತೆ ಹೆಸರು ಬದಲಾವಣೆಗೆ ಅರ್ಜಿ ಹಾಕಿದ್ದೆ. ಆದರೆ, ಈ ಬಾರಿ ಶ್ರೀಕಂತಿ ಕುತ್ತಾ ಎಂದು ಮುದ್ರಿಸಲಾಗಿದೆ. ಇದೊಂದು ನಿಜಕ್ಕೂ ಅಧಿಕಾರಿಗಳು ಮಾಡಿರುವ ಹಾಸ್ಯಾಸ್ಪದ ಕೃತ್ಯ. ಜನರು ಅಧಿಕಾರಿಗಳ ಹಿಂದೆ ಎಷ್ಟು ಬಾರಿ ಅಂತಾ ಅಲೆಯಬೇಕೆಂದೂ ಅವರು ಖಾರವಾಗಿ ಪ್ರಶ್ನಿಸಿದರು.
ಇದನ್ನು ಗಮನಕ್ಕೆ ತರಲು ಜಂಟಿ ಬಿಡಿಒ ಬಳಿ ಹೋಗಿದ್ದೆ. ಆದರೆ, ಅವರು ನನ್ನೊಂದಿಗೆ ಮಾತನಾಡಲು ನಿರಾಕರಿಸಿದ್ದರು. ಈ ಸರ್ಕಾರಿ ಅಧಿಕಾರಿಗಳು ಜನರಿಗಾಗಿ ಕೆಲಸ ಮಾಡಬೇಕಾದವರು. ಆದರೆ, ಈ ರೀತಿಯಾಗಿ ವರ್ತಿಸುತ್ತಾರೆ. ಹಾಗಾಗಿ ನಾಯಿಯಂತೆ ಬೊಗಳುವ ಮೂಲಕ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇನೆ. ಸದ್ಯ ಜಿಲ್ಲಾಡಳಿತದಿಂದ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲ. ಆದರೆ, ಒಂದೆರಡು ದಿನಗಳಲ್ಲಿ ಈ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ದತ್ತಾ ಮಾಹಿತಿ ನೀಡಿದರು.
ಇದನ್ನೂ ಓದಿ: 10 ಸಾವಿರ ಜನರ ಬಲಿ ಪಡೆದಿದ್ದ ಭೀಕರ ಚಂಡಮಾರುತದಲ್ಲಿ ಕಣ್ಮರೆ: 23 ವರ್ಷಗಳ ಬಳಿಕ ಕುಟುಂಬ ಸೇರಿದ 80ರ ವೃದ್ಧ!