ಶ್ರೀನಗರ, ಜಮ್ಮು ಕಾಶ್ಮೀರ : ಇಬ್ಬರು ವ್ಯಕ್ತಿಗಳಿದ್ದ ಜೀಪ್ ಕಂದರದೊಳಗೆ ಉರುಳಿ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನ ಝಿಗ್ ಮೋರ್ನಲ್ಲಿ ನಡೆದಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂದರಕ್ಕೆ ಉರುಳುವ ಮುನ್ನ ಇಬ್ಬರು ವ್ಯಕ್ತಿಗಳು ಜೀಪ್ನಿಂದ ಹಾರಿ ತಮ್ಮ ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಬೇರೊಂದು ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಗಳು ಈ ದೃಶ್ಯ ಸೆರೆ ಹಿಡಿದಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಳಿಗಾಲದಲ್ಲಿ ಕಾಶ್ಮೀರದಲ್ಲಿ ವಾಹನ ಚಾಲನೆ ಮಾಡುವುದು ಅತ್ಯಂತ ಕಷ್ಟಕರ. ವಾಹನಗಳು ಕಂದರಕ್ಕೆ ಉರುಳದಂತೆ ತಡೆಯಲು ಇರುವ ತಡೆಗೋಡೆಗಳೂ ಕೂಡ ದುರ್ಬಲವಾಗಿವೆ ಎಂಬುದು ಆತಂಕಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಗುಲ್ಮಾರ್ಗ್ನಲ್ಲಿ ಹಿಮದ ವಾತಾವರಣ ಇರುವ ಕಾರಣದಿಂದ ವಾಹನ ಚಾಲನೆ ಮಾಡುವ ವ್ಯಕ್ತಿಗಳಿಗೆ ಅಲ್ಲಿನ ಪೊಲೀಸ್ ಇಲಾಖೆ ಕೆಲ ಸೂಚನೆಗಳನ್ನು ನೀಡಿದೆ. ವಾಹನಗಳು ಸ್ಲಿಪ್ ಆಗುವ ಸಾಧ್ಯತೆ ಇರುವ ಕಾರಣದಿಂದ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 7,189 ಕೋವಿಡ್ ಕೇಸ್ ಪತ್ತೆ: ಏರುತ್ತಲೇ ಇದೆ ಒಮಿಕ್ರಾನ್ ಸೋಂಕು