ಈ ಬ್ರಹ್ಮಾಂಡವೇ ಒಂದು ವಿಸ್ಮಯ. ತನ್ನೊಳಗೆ ಅದೆಷ್ಟೋ ನಿಗೂಢ ರಹಸ್ಯಗಳನ್ನೇ ಒಳಗೊಂಡಿದೆ. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಸಸ್ಯಾಹಾರಿ ಪ್ರಾಣಿ ಜಿಂಕೆ ಹಾವನ್ನು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸುಶಾಂತ ನಂದಾ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಆಗಾಗ್ಗೆ ಅಪರೂಪದ ವನ್ಯಜೀವಿಗಳ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ವಿಡಿಯೋದಲ್ಲಿ ಜಿಂಕೆಯೊಂದು ಅರಣ್ಯ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಶಾಂತವಾಗಿ ನಿಂತು ಹಾವನ್ನು ಜಗಿಯುತ್ತಿರುವುದನ್ನು ಕಾಣಬಹುದು. ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ, "ಇದು ಹಾವು ತಿನ್ನುತ್ತಿದೆಯೇ" ಎಂದು ಕೇಳುತ್ತಿರುವುದನ್ನು ಕೇಳಬಹುದು. ವಿಡಿಯೋವನ್ನು ಹಂಚಿಕೊಂಡಿರುವ ಸುಶಾಂತ ನಂದಾ ಅವರು, "ಕ್ಯಾಮೆರಾಗಳು ನಮಗೆ ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೌದು, ಕೆಲವೊಮ್ಮೆ ಸಸ್ಯಹಾರಿ ಪ್ರಾಣಿಗಖೂ ಹಾವುಗಳನ್ನು ತಿನ್ನುತ್ತವೆ" ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ. ಸಸ್ಯಾಹಾರಿ ಪ್ರಾಣಿಯೊಂದು ಹಾವನ್ನು ನುಂಗುತ್ತಿರುವುದು ಎಲ್ಲರಿಗೂ ಆಶ್ಚರ್ಯವೇ ಆಗಿದೆ. ವಿಡಿಯೋ ನೋಡಿದ ಹಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಬಾಕ್ಸ್ಗಳನ್ನು ತುಂಬಿದ್ದಾರೆ. ಹಾಗೇ ಒಬ್ಬರು ಟ್ವಿಟರ್ ಬಳಕೆದಾರರು, "ಪ್ರಕೃತಿಯು ನಂಬಲಾಗದ ಮತ್ತು ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಂದ ತುಂಬಿದೆ, ಮತ್ತು ಈ ವೀಡಿಯೊ ಅಂತಹ ಒಂದು ನಿದರ್ಶನವನ್ನು ಪ್ರದರ್ಶಿಸುತ್ತದೆ. ಇದು ಪ್ರಾಣಿಗಳ ನಡವಳಿಕೆಯ ವಿಶಾಲ ವೈವಿಧ್ಯತೆ ಮತ್ತು ವಿವಿಧ ಜಾತಿಗಳು ಬದುಕಲು ಹೊಂದಿಕೊಳ್ಳುವ ಅನನ್ಯ ವಿಧಾನಗಳ ಬಗ್ಗೆ ವಿವರಿಸುವಂತಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು, ಇದು ಆಶ್ಚರ್ಯಕರ ಆವಿಷ್ಕಾರ, ಇದು ಪ್ರಾಣಿಗಳ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸ್ವಭಾವದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟು ಹಾಕುತ್ತದೆ ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, ಸಸ್ಯಾಹಾರಿಗಳು ಕೆಲವೊಮ್ಮೆ ತಮ್ಮ ಮಿನರಲ್ ಅಗತ್ಯಗಳನ್ನು ಪೂರೈಸಲು ಮೂಳೆಗಳು ಅಥವಾ ಮಾಂಸವನ್ನು ತಿನ್ನುತ್ತವೆ. ಅವುಗಳು ಅವಕಾಶ ಸಿಕ್ಕರೆ ಮಾಂಸವನ್ನು ತಿನ್ನುತ್ತವೆ ಮತ್ತು ಶವಗಳನ್ನು ಅಗಿಯುತ್ತವೆ. ಒಂಟೆಗಳೂ ಹಾವುಗಳನ್ನು ತಿನ್ನುವುದನ್ನು ಕಾಣಬಹುದು. ಕುದುರೆಗಳು, ಹಿಪ್ಪೋಗಳು, ಜಿರಾಫೆಗಳು, ಜಿಂಕೆಗಳು ಮತ್ತು ಜೀಬ್ರಾಗಳು ಸಹ ಪಕ್ಷಿಗಳು ಅಥವಾ ಸ್ಕ್ಯಾವೆಂಜಿಂಗ್ ತಿನ್ನುವುದನ್ನು ಕಾಣಬಹುದು" ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಗಡಿಯಲ್ಲಿ ಮರಿ ಆನೆ ಅಟ್ಯಾಕ್...ಸವಾರ ಜಸ್ಟ್ ಮಿಸ್, ಬೈಕ್ ಪೀಸ್-ಪೀಸ್