ನವದೆಹಲಿ: ಅನೇಕ ವಿಷಯಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರಿಗೆ ತಪ್ಪು ಮಾಹಿತಿಗಳನ್ನು ರವಾನಿಸುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಸೀತಾರಾಮನ್, ಬಜೆಟ್ ಭಾಷಣದ ವೇಳೆ ಕಾಂಗ್ರೆಸ್ ಪಕ್ಷವು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ತನ್ನ ಪ್ರಣಾಳಿಕೆಯಲ್ಲಿ ಯೂ-ಟರ್ನ್ ತೆಗೆದುಕೊಂಡಿದ್ದೇಕೆ? ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕೃಷಿ ಕಾನೂನುಗಳಿಂದ ರೈತರಿಗೆ ಹಾನಿಯುಂಟುಮಾಡುವ ಯಾವುದಾದರೂ ಒಂದು ಅಂಶವನ್ನು ಕೈ ಮುಖಂಡರು ಸದನದಲ್ಲಿ ಎತ್ತುತ್ತಾರೆಂದು ನಿರೀಕ್ಷಿಸುತ್ತಿದ್ದೆ. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡುತ್ತಾರೆಂದು ಭಾವಿಸಿದ್ದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ದೇಶದ ಪುನಶ್ಚೇತನಕ್ಕಾಗಿ ಈ ಬಜೆಟ್.. ಜನಸಾಮಾನ್ಯರೇ ಇಲ್ಲಿ ಬಂಡವಾಳಶಾಹಿಗಳು: ಸೀತಾರಾಮನ್
'ಕಾಂಗ್ರೆಸ್ ಯೋಜನೆಗಳಿಗೆ ಜನ್ಮ ನೀಡಿ, ತಪ್ಪಾಗಿ ನಿರ್ವಹಿಸುತ್ತದೆ'
ಯೋಜನೆಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಕಾಂಗ್ರೆಸ್ಗೆ ಇಲ್ಲ. ಕಾಂಗ್ರೆಸ್ ಕೇವಲ ಯೋಜನೆಗಳಿಗೆ ಜನ್ಮ ನೀಡುತ್ತದೆ, ಆದರೆ ಅವುಗಳನ್ನು ತಪ್ಪಾಗಿ ನಿರ್ವಹಿಸುತ್ತದೆ. ಛತ್ತೀಸ್ಗಢ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೀವು ಭರವಸೆ ನೀಡಿದ ಕೃಷಿ ಸಾಲ ಮನ್ನಾ ಏನಾಯಿತು? ಮನ್ರೇಗಾ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಕ್ರೆಡಿಟ್ ಅನ್ನು ನೀವು ತೆಗೆದುಕೊಳ್ಳಿ. ಫಲಾನುಭವಿಗಳಲ್ಲದವರಿಗೆ ಮನ್ರೇಗಾ ಯೋಜನೆಯ ಲಾಭ ನೀಡಿದ ಕೊಡುಗೆ ನಿಮ್ಮದಾಗಿದೆ ಎಂದು ಸೀತಾರಾಮನ್ ವ್ಯಂಗ್ಯವಾಡಿದರು.