ಲಂಡನ್ (ಯುಕೆ): ಜಿಂಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘುರ್ ಮುಸಲ್ಮಾನ ಸಮುದಾಯದ ಹಾಗೂ ಹಾಂಗ್ಕಾಂಗ್ ಜನತೆಯ ಮಾನವ ಹಕ್ಕುಗಳನ್ನು ಚೀನಾ ಉಲ್ಲಂಘಿಸುತ್ತಿರುವ ಬಗ್ಗೆ ಜಿ7 ರಾಷ್ಟ್ರಗಳ ನಾಯಕರು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತಾಗಿ ಚೀನಾಕ್ಕೆ ವಿಶ್ವದ ಒಗ್ಗಟ್ಟಿನ ಸಂದೇಶ ನೀಡುವ ನಿರ್ಣಯ ಕೈಗೊಂಡಿದ್ದಾರೆ.
"ವಿಶ್ವದ ಅತಿ ದೊಡ್ಡ ದೇಶಗಳು ಹಾಗೂ ಆರ್ಥಿಕ ಶಕ್ತಿಗಳು ಅಂತಾರಾಷ್ಟ್ರೀಯ ವ್ಯವಸ್ಥೆ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವುದು ಆ ನಿರ್ದಿಷ್ಟ ದೇಶಗಳ ಕರ್ತವ್ಯವಾಗಿರುತ್ತದೆ. ನಮ್ಮೆಲ್ಲರ ಒಗ್ಗಟ್ಟಿನ ಮೂಲಕ ನಿರ್ಣಯಿಸಲಾದ ಗೊತ್ತುವಳಿಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದಲ್ಲಿ ನಾವಿದನ್ನು ಜಾರಿಗೊಳಿಸುತ್ತೇವೆ. ಚೀನಾ ವಿಷಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿನ ಸ್ಪರ್ಧಾತ್ಮಕತೆಗಳನ್ನು ನೋಡುವುದಾದರೆ, ಜಾಗತಿಕ ಆರ್ಥಿಕ ವ್ಯವಸ್ಥೆಯ ಪಾರದರ್ಶಕತೆಗೆ ಭಂಗ ತರುವ ಎಲ್ಲ ವಿಷಯಗಳ ಬಗ್ಗೆ ನಾವು ಸೂಕ್ತವಾಗಿ ಸ್ಪಂದಿಸಲಿದ್ದೇವೆ." ಎಂಬ ನಿರ್ಣಯವನ್ನು ಇಂದು ನಡೆದ ಜಿ7 ರಾಷ್ಟ್ರಗಳ ನಾಯಕರ ಕಾರ್ಬಿಸ್ ಬೇ ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.
ಜಿಂಜಿಯಾಂಗ್ ಪ್ರಾಂತ್ಯದಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆಗೆ ಹಾಗೂ ಹಾಂಗ್ ಕಾಂಗ್ ದೇಶದ ಸ್ವಾಯತ್ತತೆ ಹಾಗೂ ಅಲ್ಲಿನ ಜನರ ಹಕ್ಕುಗಳನ್ನು ಕಾಪಾಡಲು ಚೀನಾ ಮುಂದಾಗುವಂತೆ ನಾವು ಇದೇ ಸಂದರ್ಭದಲ್ಲಿ ಒತ್ತಾಯಿಸುತ್ತೇವೆ ಎಂದು ಜಿ7 ರಾಷ್ಟ್ರಗಳ ನಾಯಕರು ಹೇಳಿದ್ದಾರೆ.
ಅತಿಥಿ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಸೌತ್ ಕೊರಿಯಾ ಹಾಗೂ ಜಿ7 ರಾಷ್ಟ್ರಗಳ ನಾಯಕರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಮುಕ್ತ ಸಮಾಜ ನಿರ್ಮಾಣ, ಪ್ರಜಾಪ್ರಭುತ್ವದ ಬೆಳವಣಿಗೆ, ಮಾಧ್ಯಮ ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿಯಂತ್ರಣ ಮುಂತಾದ ಮೌಲ್ಯಗಳ ಬಗ್ಗೆ ಒಗ್ಗಟ್ಟಿನ ಪ್ರಯತ್ನ ಮಾಡಲು ನಿರ್ಧರಿಸಲಾಯಿತು.
ಉಕ್ರೇನ್, ಬೆಲಾರುಸ್, ಇಥಿಯೋಪಿಯಾ, ಛಾಡ್, ಮಾಲಿ ಹಾಗೂ ಅಫ್ಘಾನಿಸ್ತಾನಗಳಲ್ಲಿನ ಅರಾಜಕ ಪರಿಸ್ಥಿತಿಯ ಬಗ್ಗೆಯೂ ಕೆಲ ರಾಷ್ಟ್ರಗಳ ನಾಯಕರು ಕಳವಳ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ನಡೆಯುತ್ತಿರುವ ಪ್ರಥಮ ಜಿ7 ಸಭೆ ಇದಾಗಿದೆ. ಈ ಬಾರಿ ಶುಕ್ರವಾರದಿಂದ ಕಾರ್ನಿಸ್ ಕರಾವಳಿಯಲ್ಲಿ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳು ಜಿ7 ಸಭೆಗಾಗಿ ಸೇರಿವೆ. ಇಲ್ಲಿ ಸೇರಿದ ರಾಷ್ಟ್ರಗಳು ಒಟ್ಟಾಗಿ 1 ಬಿಲಿಯನ್ ಡೋಸ್ ಕೊರೊನಾ ವ್ಯಾಕ್ಸಿನ್ ದೇಣಿಗೆ ನೀಡುವ ವಾಗ್ದಾನ ಮಾಡಿದವು. ಇದರಲ್ಲಿ ಅರ್ಧದಷ್ಟನ್ನು ಅಮೆರಿಕವೇ ನೀಡಲಿದೆ.