ವಾರಂಗಲ್(ತೆಲಂಗಾಣ) : ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕೆಸರಿನ ಹೊಂಡದಲ್ಲಿ ಸಿಲುಕಿದ್ದ ವೃದ್ಧನೋರ್ವನ ರಕ್ಷಣೆ ಮಾಡಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಾನವೀಯತೆ ಮೆರೆದಿದ್ದಾರೆ. ತೆಲಂಗಾಣದ ವಾರಂಗಲ್ನ ಕೊಂಡಾಪುರಂ ರಾಯಪರ್ತಿ ಮಂಡಲದಲ್ಲಿ ಈ ಘಟನೆ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಕುರಿ ಮೇಯಿಸಲು ಹೋಗಿದ್ದಾಗ ವೃದ್ಧನೋರ್ವ ಕೆಸರಿನ ಹೊಂಡದಲ್ಲಿ ಸಿಲುಕಿದ್ದಾನೆ. ಅಲ್ಲಿಂದ ಮೇಲೆ ಎದ್ದು ಬರಲು ಸಾಧ್ಯವಾಗದ ಕಾರಣ ಮೂರು ದಿನಗಳ ಕಾಲ ಅಸಹಾಯಕನಾಗಿ ಸ್ಥಳದಲ್ಲೇ ಮಲಗಿದ್ದಾನೆ. ಆತನನ್ನು ನೋಡಿರುವ ಗ್ರಾಮಸ್ಥರು ಇಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ ಜೂನಿಯರ್ ಆರ್ಟಿಸ್ಟ್ ಸಾವು
ಸ್ಥಳಕ್ಕೆ ತೆರಳಿದ ಸಬ್ಇನ್ಸ್ಪೆಕ್ಟರ್ ಬಂಡಾರಿ ರಾಜು ಅವರು, ವೃದ್ಧನಿಗೆ ಬಟ್ಟೆ ತೊಡಿಸಿ ಸುಮಾರು 1 ಕಿಲೋಮೀಟರ್ ದೂರ ಹೊತ್ತುಕೊಂಡು ಹೋಗಿದ್ದಾರೆ. ಕೋವಿಡ್ ಆರ್ಭಟ ಜೋರಾಗಿರುವ ಕಾರಣ ಸ್ಥಳೀಯರು ಆತನ ಸಹಾಯಕ್ಕೆ ಹಿಂದೇಟು ಹಾಕಿದ್ದಾರೆ.
ಸ್ಥಳಕ್ಕೆ 108 ಬರಲು ಸಾಧ್ಯವಿಲ್ಲದ ಕಾರಣ ಖುದ್ದಾಗಿ ಎಸ್ಐ ಹೊತ್ತು ಸಾಗಿದ್ದಾರೆ. ಜೊತೆಗೆ ಆತನನ್ನ ಮೆಹಬೂಬಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಬ್ ಇನ್ಸ್ಪೆಕ್ಟರ್ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.