ಮೆಲ್ಬೋರ್ನ್: ನೀವು ಕಾಫಿ ಪ್ರಿಯರಾ? ಆಗಾಗ ಕಾಫಿ ಹೀರುವುದು ನಿಮಗೆ ಇಷ್ಟವಾ? ಹಾಗಾದ್ರೆ ನೀವು ದೀರ್ಘಾಯುಷಿ ಅಂತಾರೆ ಸಂಶೋಧಕರು. ನಿತ್ಯ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸುವವರು ದೀರ್ಘಾಯುಷಿಗಳಾಗುತ್ತಾರೆ ಎಂದು ಹೊಸ ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಅಂದರೆ ಈ ತರಹ ಕಾಫಿ ಪ್ರಿಯರಿಗೆ ಹೃದಯ ಕಾಯಿಲೆ ಬರುವ ಸಾಧ್ಯತೆ ಕಮ್ಮಿ ಅಂತೆ.
ಆಸ್ಟ್ರೇಲಿಯಾದ ದಿ ಬೇಕರ್ ಹಾರ್ಟ್ ಅಂಡ್ ಡಯಾಬಿಟೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಈ ಅಧ್ಯಯನ ಕೈಗೊಂಡಿತ್ತು. ಇದರ ಭಾಗವಾಗಿ ಯುಕೆ ಬಯೊಬ್ಯಾಂಕ್ನ 40 ರಿಂದ 69 ವಯೋಮಾನದ 4,49,563 ಜನರ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿತ್ತು. ಇವರಲ್ಲಿ ವಿವಿಧ ರೀತಿಯ ಕಾಫಿ ಸೇವಿಸುವವರು ಮತ್ತು ಅವರಿಗೆ ಹೃದಯ ಕಾಯಿಲೆ ಬಂದಿದ್ದು ಹಾಗೂ ಮರಣದ ಬಗ್ಗೆ ಅಧ್ಯಯನ ನಡೆಸಲಾಗಿತ್ತು.
ನಿಯಮಿತವಾಗಿ ಕಾಫಿ ಸೇವಿಸುವವರಲ್ಲಿ ಹೃದಯ ವೈಫಲ್ಯ ಸಂಭವಿಸುವುದು ಕಡಿಮೆ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಸಂಶೋಧಕ ಪೀಟರ್ ಕಿಸ್ಟೆಲ್ಲರ್ ಅವರು, ಡಿಕೆಫೀನ್ ಮಾಡಿದ ಇನ್ ಸ್ಟಂಟ್ ಪುಡಿ ಕಾಫಿಯನ್ನು ಪ್ರತಿ ದಿನ ಮಿತವಾಗಿ ಸೇವಿಸಬಹುದು ಮತ್ತು ಇದನ್ನು ಆರೋಗ್ಯಕರ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸೂಚಿಸುತ್ತಾರೆ.
ಇದನ್ನೂ ಓದಿ: ತೆರೆ ಮೇಲೆ ಬರಲಿದೆ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಬಯೋಪಿಕ್