ಗುವಾಹಟಿ/ಅಸ್ಸೋಂ : ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭಾನುವಾರ ದೇಶದ ನದಿಗಳನ್ನು ಪುನಶ್ಚೇತನಗೊಳಿಸುವ ಅಗತ್ಯತೆಯ ಕುರಿತು ಪ್ರಬಲ ರಾಷ್ಟ್ರೀಯ ಅಭಿಯಾನಕ್ಕೆ ಕರೆ ನೀಡಿದರು. ಇದನ್ನು ತುರ್ತಾಗಿ ಮಾಡಬೇಕು ಎಂದು ಹೇಳಿದರು.
ಬೆಳೆಯುತ್ತಿರುವ ನಗರೀಕರಣ ಮತ್ತು ಕೈಗಾರಿಕೀಕರಣವು ದೇಶದ ವಿವಿಧ ಭಾಗಗಳಲ್ಲಿ ನದಿಗಳು ಮತ್ತು ಇತರ ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು. "ಹಿಂದೆ, ನಮ್ಮ ಹಳ್ಳಿಗಳು ಮತ್ತು ನಗರಗಳು ಹೆಚ್ಚು ಜಲಮೂಲಗಳಿಂದ ಕೂಡಿದ್ದವು.
ಆಧುನೀಕರಣದ ಹೆಸರಲ್ಲಿ ಮನುಷ್ಯನ ದುರಾಸೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಿದನು ಮತ್ತು ಹಲವಾರು ಸ್ಥಳಗಳಲ್ಲಿ, ಜಲಮೂಲಗಳು ವಾಸ್ತವಿಕವಾಗಿ ಕಣ್ಮರೆಯಾಗಿವೆ ಅಥವಾ ಅತಿಕ್ರಮಣಗೊಂಡಿವೆ'' ಎಂದು ವೆಂಕಯ್ಯ ನಾಯ್ಡು ಬೇಸರ ವ್ಯಕ್ತಪಡಿಸಿದ್ರು.
ಈಶಾನ್ಯ ಭಾಗದ ಪ್ರವಾಸಕ್ಕಾಗಿ ಭಾನುವಾರ ಇಲ್ಲಿಗೆ ಆಗಮಿಸಿದ ಉಪರಾಷ್ಟ್ರಪತಿಗಳು, ಬ್ರಹ್ಮಪುತ್ರಾ ನದಿಯ ದಡದಲ್ಲಿರುವ ಹೆರಿಟೇಜ್ ಕಮ್-ಕಲ್ಚರಲ್ ಸೆಂಟರ್ ಅನ್ನು ಉದ್ಘಾಟಿಸುವ ಮೂಲಕ ತಮ್ಮ ಪ್ರವಾಸವನ್ನು ಆರಂಭಿಸಿದರು.
ನಂತರ ಫೇಸ್‌ಬುಕ್ ಪೋಸ್ಟ್‌ನಲ್ಲಿ, ನಾಯ್ಡು ಅಸ್ಸೋಂ ಮತ್ತು ಬ್ರಹ್ಮಪುತ್ರ ನದಿಗೆ ಭೇಟಿ ನೀಡಿದ ಅನುಭವವನ್ನು ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ. ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಒದಗಿಸುವ ದೊಡ್ಡ ನದಿ ಈ ಪ್ರದೇಶದ ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಬರೆದಿದ್ದಾರೆ.
ನದಿಗಳ ಮಹತ್ವ ಮತ್ತು ಅವುಗಳ ಪುನರುಜ್ಜೀವನದ ಅವಶ್ಯಕತೆಯನ್ನರಿತ ನಾಯ್ಡು, ಶಾಲಾ ಪಠ್ಯಕ್ರಮದಲ್ಲಿ ನೀರಿನ ಸಂರಕ್ಷಣೆಯ ಮಹತ್ವದ ಪಾಠಗಳನ್ನು ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದರು.