ನವದೆಹಲಿ : ನೇಪಾಳ-ಭಾರತದ ಸಂಬಂಧಕ್ಕೆ ಯಾವುದೂ ಸಾಟಿಯಿಲ್ಲ. ಉಭಯ ರಾಷ್ಟ್ರಗಳ ನಡುವಿನ ನಾಗರಿಕತೆ ಮತ್ತು ಜನರ ಸಂಪರ್ಕವೇ ನಮ್ಮ ನಿಕಟ ಸಂಬಂಧದ ಸೌಧವನ್ನು ರೂಪಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬುದ್ಧ ಪೂರ್ಣಿಮೆಯ ನಿಮಿತ್ತ ಸೋಮವಾರ ನೇಪಾಳದ ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಇದರ ಮುಂಚಿತವಾಗಿ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಮೆಲುಕು ಹಾಕಿದ್ದಾರೆ.
ಕಳೆದ ತಿಂಗಳು ಭಾರತಕ್ಕೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಭೇಟಿ ನೀಡಿದ್ದರು. ಈಗ ಮತ್ತೊಮ್ಮೆ ಅವರನ್ನು ಭೇಟಿಯಾಗಲು ಉತ್ಸುಕನಾಗಿರುವೆ ಎಂದು ಮೋದಿ ತಿಳಿಸಿದ್ದಾರೆ. ಜಲವಿದ್ಯುತ್, ಪ್ರಗತಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಪರಸ್ಪರ ಮುಂದುವರಿಯಲಿದೆ ಎಂದೂ ಹೇಳಿದ್ದಾರೆ.
ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನಾನು ಎದುರು ನೋಡುತ್ತಿದ್ದೇನೆ. ಭಗವಾನ್ ಬುದ್ಧನ ಜನ್ಮದ ಪವಿತ್ರ ಸ್ಥಳದಲ್ಲಿ ಲಕ್ಷಾಂತರ ಭಾರತೀಯರ ಹೆಜ್ಜೆ ಗುರುತುಗಳನ್ನು ಅನುಸರಿಸಲು ನನಗೆ ಗೌರವವಿದೆ. ಜೊತೆಗೆ ನಾನು ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ ಎಂದು ಮೋದಿ ಹೇಳಿದ್ಧಾರೆ.
ಇದನ್ನೂ ಓದಿ: ಪುತ್ರನ ವಿರುದ್ಧ ಅತ್ಯಾಚಾರ ಆರೋಪ : ರಾಜಸ್ಥಾನ ಸಚಿವ ಮಹೇಶ್ ಜೋಶಿ ಮನೆಗೆ ಸಮನ್ಸ್ ಜಾರಿ