ನಿಜಾಮಾಬಾದ್(ತೆಲಂಗಾಣ): ನಿಜಾಮಾಬಾದ್ ಜಿಲ್ಲಾಡಳಿತ ಕಚೇರಿಯಲ್ಲಿ ಸರಪಂಚ್ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಬಿಲ್‌ಗಳಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದು ಮಹಿಳಾ ಸರಪಂಚ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ನಡೆದ ಈ ಘಟನೆ ನಗರದಲ್ಲಿ ಸಂಚಲನ ಮೂಡಿಸಿತ್ತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ನಿಜಾಮಾಬಾದ್ ಜಿಲ್ಲೆ ನಂದಿಪೇಟೆ ತಾಲೂಕು ಕೇಂದ್ರದ ಸರಪಂಚ್ ಸಾಂಬಾರು ವಾಣಿ ಮತ್ತು ವಾರ್ಡ್‌ನ ಸದಸ್ಯರಾಗಿರುವ ಅವರ ಪತಿ ತಿರುಪತಿ ಅವರು ಸೋಮವಾರ ಜಿಲ್ಲಾಡಳಿತ ಕಚೇರಿಗೆ ಬಂದಿದ್ದರು. ಈ ವೇಳೆ, ತಿರುಪತಿ ಮತ್ತು ಸಾಂಬಾರು ವಾಣಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯ ಪೊಲೀಸರು ಕೂಡಲೇ ಅವರಿದ್ದ ಸ್ಥಳಕ್ಕೆ ದೌಡಾಯಿಸಿ ಆ ಯತ್ನವನ್ನು ತಡೆದಿದ್ದಾರೆ.
ಸರಪಂಚ್ ದಂಪತಿ ಹೇಳಿದ್ದೇನು?: ಘಟನೆ ಬಗ್ಗೆ ಮಾತನಾಡಿದ ಸರಪಂಚ್ ದಂಪತಿ, ಸಾಲ ಮಾಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ಆದರೂ ಅದಕ್ಕೆ ಸಹಿ ಮಾಡಿಲ್ಲ ಎಂದು ಆರೋಪಿಸಿದರು. ಇಷ್ಟೊಂದು ಹಣ ಖರ್ಚು ಮಾಡಿದ್ರೂ ಬಿಲ್‌ಗಳಿಗೆ ಸಹಿ ಆಗಿಲ್ಲ. ಶಾಸಕ ಜೀವನ್ ರೆಡ್ಡಿ ಅವರೂ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬಿಲ್‌ಗಳನ್ನು ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿದರು. ವಿಷಯ ತಿಳಿದು ಡಿಪಿಒ ಜಯಸುಧಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಗ್ರಾಮದಲ್ಲಿ ರೂ.90 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 68.10 ಲಕ್ಷ ರೂಗಳನ್ನ ಪಾವತಿಸಲಾಗಿದೆ. ಉಳಿದ ಮೊತ್ತ ಪಾವತಿಸಬೇಕಿದೆ ಎಂದು ದಂಪತಿ ತಿಳಿಸಿದ್ದಾರೆ. ಕಾಮಗಾರಿ ಪರಿಶೀಲಿಸಿ ಸಹಿ ಮಾಡುವುದಾಗಿ ಉಪ ಸರಪಂಚರು ಹೇಳಿದಾಗ ವಾಗ್ವಾದ ಉಂಟಾಗಿದೆ ಎಂದರು. ಸರಪಂಚ್ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಿಜಾಮಾಬಾದ್ ಗ್ರಾಮಾಂತರ ಎಸ್ಐ ಲಿಂಬಾದ್ರಿ ತಿಳಿಸಿದ್ದಾರೆ. ಈ ಘಟನೆ ಕುರಿತು ಸಿಎಂ ಕಚೇರಿ ಕೂಡಾ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.
ರಾತ್ರೋರಾತ್ರಿ ತಿರುವು ಪಡೆದುಕೊಂಡ ಪ್ರಕರಣ: ಸರಪಂಚ್ ದಂಪತಿ ಆತ್ಮಹತ್ಯೆ ಯತ್ನ ಪ್ರಕರಣ ರಾತ್ರಿ ವೇಳೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಾಸಕರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪಕ್ಷದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂದಿದ್ದ ಸರಪಂಚ ದಂಪತಿ ರಾತ್ರೋರಾತ್ರಿ ತಮ್ಮ ಮಾತುಗಳನ್ನು ಬದಲಾಯಿಸಿಕೊಂಡಿದ್ದಾರೆ. ರಾತ್ರಿಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ದಂಪತಿ, ಪಂಚಾಯಿತಿ ಕಾಮಗಾರಿಗೆ ಹಣ ಖರ್ಚು ಮಾಡಿ ತೊಂದರೆ ಅನುಭವಿಸುವುದೇಕೆ ಎಂಬ ಮನಸ್ತಾಪದಿಂದಾಗಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದರು. ಎರಡು ದಿನಗಳ ಹಿಂದೆ ಶಾಸಕ ಜೀವನ್ ರೆಡ್ಡಿ ನಮ್ಮ ಪರಿಸ್ಥಿತಿ ಅರಿತು ಬಾಕಿ ಬಿಲ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ವಿಡಿಯೋ ವೈರಲ್: ಸರಪಂಚ್ ದಂಪತಿ ನಿಜಾಮಾಬಾದ್ ಜಿಲ್ಲಾಡಳಿತದಲ್ಲಿ ಸೃಷ್ಟಿಸಿದ ಹೈಡ್ರಾಮಾವನ್ನು ಸ್ಥಳೀಯರು ತಮ್ಮ - ತಮ್ಮ ಮೊಬೈಲ್ಗಳಲ್ಲಿ ಚಿತ್ರಿಕರಿಸಿದ್ದರು. ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸಿಎಂ ಕಚೇರಿಗೂ ಇದರ ಬಿಸಿ ತಟ್ಟಿತ್ತು. ಹೀಗಾಗಿ ಸಿಎಂ ಕಚೇರಿ ಈ ಘಟನೆ ಬಗ್ಗೆ ಮಾಹಿತಿ ಕೇಳಿದೆ.
ಓದಿ: ಬಂಡೆಗಳ ನಡುವೆ ಸಿಲುಕಿ 3 ಗಂಟೆ ಸಾವು-ಬದುಕಿನ ಹೋರಾಟ; ಪೊಲೀಸರಿಂದ ಯುವಕನ ರಕ್ಷಣೆ