ಚೆನ್ನೈ(ತಮಿಳುನಾಡು): ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವಂತೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಚುನಾವಣೆ ಆರಂಭವಾಗಿದ್ದು, ವಿವಿಧ ರಾಜಕೀಯ ಮುಖಂಡರು ಪಕ್ಷದ ತಮ್ಮ ವೋಟು ಚಲಾಯಿಸಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಚೆನ್ನೈನ ತೇನಮಪೆಟ್ಟೈ ವಾರ್ಡ್ ನಂಬರ್ 122ರಲ್ಲಿ ಮತದಾರರ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದ್ದಾರೆ. ಅವರ ಜೊತೆಗೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಕೂಡಾ ಸರದಿಯಲ್ಲಿ ನಿಂತು ಮತ ಚಲಾಯಿಸಿದ್ದಾರೆ. ನಂತರ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೂಡಾ ಮತ ಚಲಾಯಿಸಿದರು. ನಟ ವಿಜಯ್ ಕೂಡಾ ಮತದಾನ ಮಾಡಿದ್ದಾರೆ.
ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಅದು ಅವರ ಪ್ರಜಾಸತ್ತಾತ್ಮಕ ಕರ್ತವ್ಯವಾಗಿದೆ. ಈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಎಂಕೆ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ತೆಲಂಗಾಣದ ಗವರ್ನರ್ ತಮಿಳಿಸಾಯಿ ಸೌಂದರರಾಜನ್ ಚೆನ್ನೈನ ಸಲಾಯಿಗ್ರಾಮಮ್ನಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಥೇಣಿ ಜಿಲ್ಲೆಯ ಪೆರಿಯಾಕುಲಂ ಮತಗಟ್ಟೆಯಲ್ಲಿ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಮುಖಂಡ ಪನೀರ್‌ಸೆಲ್ವಂ ಮತ ಚಲಾಯಿಸಿದರು.
ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರು ಚೆನ್ನೈನ ಟಿ.ನಗರ ಮತಗಟ್ಟೆಯಲ್ಲಿ ಮತ ಹಾಕಿದರು. ನಾಮ್ ತಮಿಳರ್ ಕಚ್ಚಿ ಮುಖ್ಯಸ್ಥ ಸೀಮಾನ್ ಅಲಪಕ್ಕಂ ಮತಗಟ್ಟೆಯಲ್ಲಿ, ನಟಿ ಮತ್ತು ಬಿಜೆಪಿ ನಾಯಕಿ ಖುಷ್ಭು ಮಾಂಧೈವೇಲಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ನಗರಗಳ ಮಧ್ಯೆ ಸ್ಪರ್ಧೆ: ನಡಿಗೆ, ಓಟ, ಸೈಕಲ್ನಲ್ಲಿ ಬೆಂಗಳೂರು ಫಸ್ಟ್