ನವದೆಹಲಿ: ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಯ ಮತ ಎಣಿಕೆ ನಡೆಯುತ್ತಿದೆ. ಇದೇ ವೇಳೆಯೇ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖರ್ಗೆ ಪರವಾಗಿ ನಾಯಕರು ಬಹಿರಂಗ ಬೆಂಬಲ ನೀಡಿ ಪ್ರಚಾರ ಮಾಡಿದ್ದಾರೆ. ಇದು ಚುನಾವಣಾ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್ ಅವರ ಬೆಂಬಲಿಗರು ಆರೋಪಿಸಿದ್ದಾರೆ.
ಮತ ಎಣಿಕೆ ಪ್ರದೇಶದಲ್ಲಿ ಖರ್ಗೆ ಪರ ಏಜೆಂಟರು ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದೂ ದೂರಲಾಗಿದೆ. ಮತ ಎಣಿಕೆಗೂ ಮೊದಲು ಶಶಿ ತರೂರ್ ಅವರ ಪರ ಏಜೆಂಟ್ ಆದ ಸಲ್ಮಾನ್ ಸೋಜ್ ಎಂಬುವವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮತದಾನದ ನಿಯಮಾವಳಿ ಉಲ್ಲಂಘನೆಯ ಆರೋಪ ಮಾಡಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಪ್ರಚಾರ ಮಾಡದಂತೆ ಸೂಚಿಸಿದ್ದರೂ ನಾಯಕರು ನಿಯಮ ಉಲ್ಲಂಘಿಸಿದ್ದಾರೆ. ಇದರ ವಿರುದ್ಧ ಚುನಾವಣಾಧಿಕಾರಿಗೆ ದೂರ ನೀಡಲಾಗಿದೆ. ಸಾಂಸ್ಥಿಕ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಇದು ಒಬ್ಬ ಅಭ್ಯರ್ಥಿಯ ವಿರುದ್ಧ ಮಾಡುವ ಅನ್ಯಾಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಉಭಯ ಅಭ್ಯರ್ಥಿಗಳ ಪರವಾಗಿ ಯಾರೂ ಪ್ರಚಾರ ಮಾಡಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು. ಆದಾಗ್ಯೂ ಕೆಲ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಇದರ ವಿರುದ್ಧ ಶಶಿ ತರೂರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
241 ವರ್ಷಗಳ ಬಳಿಕ ಎಐಸಿಸಿಗೆ ಚುನಾವಣೆ ನಡೆದಿದ್ದು, ಗಾಂಧಿಯೇತರ ವ್ಯಕ್ತಿಯೊಬ್ಬರು ಅಧ್ಯಕ್ಷ ಗಾದಿ ಏರಲಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಮತದಾನ ನಡೆದಿದ್ದು, 9500 ಕ್ಕೂ ಅಧಿಕ ಮತದಾನ ನಡೆದಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಓದಿ: ಶಶಿ ತರೂರ್ vs ಮಲ್ಲಿಕಾರ್ಜುನ ಖರ್ಗೆ: ಫಲಿತಾಂಶಕ್ಕೆ ಕ್ಷಣಗಣನೆ, ಕಾಂಗ್ರೆಸ್ಗೆ ಇಂದು ನೂತನ ಸಾರಥಿ ಆಯ್ಕೆ