ಚೆನ್ನೈ (ತಮಿಳುನಾಡು): ತಮಿಳುನಾಡಿನ ಐಪಿಎಸ್ ಅಧಿಕಾರಿ ವಿಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರು ಡಿಜಿಪಿಯಾಗಿದ್ದ 47 ವರ್ಷದ ವಿಜಯಕುಮಾರ್ ಸಾವು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಅಲ್ಪಾವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹೆಸರಿನೊಂದಿಗೆ ಅವರು ಖ್ಯಾತಿಯನ್ನು ಗಳಿಸಿದ್ದರು. ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳಿಗೆ ಸ್ಫೂರ್ತಿಯಾದ ನಿಜ ಜೀವನದ ನಾಯಕ ವಿಜಯಕುಮಾರ್ ಆಗಿದ್ದರು.
ಹೌದು, ಕಾಲಿವುಡ್‌ನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ 'ತೇರಿ' ಸಿನಿಮಾ ಸೇರಿ ಎರಡು ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ಐಪಿಎಸ್ ಅಧಿಕಾರಿ ವಿಜಯಕುಮಾರ್ ಅವರೇ ಸ್ಫೂರ್ತಿಯಾಗಿದ್ದರು. ಆದರೆ, ವಿಜಯಕುಮಾರ್ ಎಂದಿಗೂ ಗರ್ವ ಪಟ್ಟವರಲ್ಲ. ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ಮಾಡಿದ್ದ ವಿಜಯಕುಮಾರ್, 1976ರಲ್ಲಿ ತೇಣಿ ಜಿಲ್ಲೆಯ ಅಮಂಕರಪಟ್ಟಿ ಗ್ರಾಮದಲ್ಲಿ ಜನಿಸಿದ್ದರು. ಅವರ ತಂದೆ ಚೆಲ್ಲಯ್ಯ ವಿಎಒ ಆಗಿದ್ದರೆ, ತಾಯಿ ರಜತಿ ಶಾಲಾ ಶಿಕ್ಷಕಿಯಾಗಿದ್ದರು.
ಕಾಲೇಜು ವ್ಯಾಸಂಗ ಮುಗಿಸಿದ ನಂತರ 1999ರಲ್ಲಿ ತಮಿಳುನಾಡು ಲೋಕಸೇವಾ ಆಯೋಗ ನಡೆಸಿದ ಗ್ರೂಪ್-4 ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಅದೇ ಸಮಯದಲ್ಲಿ ಗ್ರೂಪ್ 2 ಪರೀಕ್ಷೆಗೆ ಅರ್ಜಿ ಸಲ್ಲಿಸಿ ಅದರಲ್ಲಿ ಉತ್ತೀರ್ಣರಾಗಿದ್ದರು. 2000ರಲ್ಲಿ ಅವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಆಡಿಟ್ ಇನ್ಸ್‌ಪೆಕ್ಟರ್ ಹುದ್ದೆಯನ್ನು ಪಡೆದಿದ್ದರು. ಇದರ ನಂತರ ತಮಿಳುನಾಡು ಪೊಲೀಸ್ ಇಲಾಖೆಯಲ್ಲಿದ್ದು, ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
2009ರಲ್ಲಿ ಯುಪಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ವಿಜಯಕುಮಾರ್, ಐಪಿಎಸ್ ಅಧಿಕಾರಿಯಾಗಿ ಭಾರತೀಯ ಪೊಲೀಸ್ ಸೇವೆಗೆ ಸೇರಿದ್ದರು. ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಡಿಎಸ್‌ಪಿಯಾಗಿ ಆರು ವರ್ಷಗಳ ಕಾಲ ಈರೋಡ್, ತಿರುವಳ್ಳೂರು ಮತ್ತು ಸಿಬಿಸಿಐಡಿ, ಚೆನ್ನೈ ಪೊಲೀಸ್ ಕಮಿಷನರ್ ಕಚೇರಿ ಸೇರಿ ಇತ್ಯಾದಿ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಜನವರಿಯಲ್ಲಿ ಬಡ್ತಿ ಪಡೆದಿದ್ದ ಅವರು ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮ ಸೇವಾವಧಿಯಲ್ಲಿ ಹಲವು ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ವಿಜಯಕುಮಾರ್ ಪಾಲ್ಗೊಂಡಿದ್ದರು. ತಮಿಳುನಾಡನ್ನು ಬೆಚ್ಚಿಬೀಳಿಸಿದ ಸಾತಾಂಕುಳಂ ಜಯರಾಜ್ ಮತ್ತು ಬೆನ್ನಿಕ್ಸ್ ಹತ್ಯೆ ಪ್ರಕರಣದಲ್ಲಿ ಸಿಬಿಸಿಐಡಿ ಎಸ್ಪಿಯಾಗಿದ್ದಾಗಲೇ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದರು. ಸುರಾನಾ ಪ್ರಕರಣದಲ್ಲಿ ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನಾಭರಣ ನಾಪತ್ತೆ ಪ್ರಕರಣದಲ್ಲೂ ವಿಜಯಕುಮಾರ್ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅಣ್ಣಾನಗರದ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅರುಂಬಕ್ಕಂನ ಪೆಟ್ ಬ್ಯಾಂಕ್ನಲ್ಲಿ ಹಗಲು ಹೊತ್ತಿನಲ್ಲಿ 20 ಕೋಟಿ ಚಿನ್ನಾಭರಣ ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು.
ಬೆಳ್ಳಿತೆರೆಯ ಕಥೆಗಳಿಗೆ ಸ್ಫೂರ್ತಿ: ತಮಿಳು ಚಿತ್ರರಂಗದ ಸಿನಿಮಾಗಳಿಗೆ ವಿಜಯಕುಮಾರ್ ಸ್ಫೂರ್ತಿಯಾಗಿದ್ದರು. 2014ರಲ್ಲಿ ಚೆನ್ನೈ ಬಳಿಯ ಸಿರುಸೇರಿಯಲ್ಲಿ ರಾತ್ರಿ ಐಟಿ ಉದ್ಯೋಗಿಯೊಬ್ಬಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಡೆದಿತ್ತು. ಚೆನ್ನೈನ ಐಟಿ ಕಾರಿಡಾರ್‌ನಲ್ಲಿ ನಡೆದಿದ್ದ ಈ ಭೀಕರ ಐಟಿ ಉದ್ಯಮವನ್ನು ಬೆಚ್ಚಿಬೀಳಿಸಿತ್ತು. ಆ ಸಮಯದಲ್ಲಿ ವಿಜಯಕುಮಾರ್ ಕಾಂಚೀಪುರಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿದ್ದರು. ಈ ಪ್ರಕರಣದ ತನಿಖೆಯೂ ಸವಾಲಾಗಿತ್ತು.
ತ್ವರಿತವಾಗಿ ಕಾರ್ಯನಿರ್ವಹಿಸಿದ್ದ ವಿಜಯಕುಮಾರ್ ಪ್ರಕರಣವನ್ನು ಭೇದಿಸಿದ್ದರು. ಉತ್ತರ ಭಾರತದಿಂದ ಬಂದ ಮೂವರು ವಲಸೆ ಕಾರ್ಮಿಕರ ಕೃತ್ಯವೆಂದು ಇದನ್ನು ಬಯಲಿಗೆ ಎಳೆದಿದ್ದರು. ಈ ಪ್ರಕರಣದ ಯಶಸ್ವಿ ತನಿಖೆಯೇ 2016ರಲ್ಲಿ ಬೆಳ್ಳಿತೆರೆಗೆ ಬಂದ 'ಥೆರಿ' ಚಿತ್ರದ ಕಥೆಯಾಗಿತ್ತು. ಈ ವಿಷಯವು ಚಿತ್ರ ಬಿಡುಗಡೆಯಾದ ಬಳಿಕ ಬಹಿರಂಗವಾಗಿತ್ತು. ಸಿನಿಮಾದಲ್ಲಿ ನಾಯಕನ ಹೆಸರು ವಿಜಯಕುಮಾರ್ ಎಂದೇ ಆಗಿತ್ತು ಎಂಬುವುದು ವಿಶೇಷ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.
ಕಾರ್ತಿ ಅಭಿನಯದ 'ತೀರನ್ ಅಧಿಗಾರಂ ಒಂಡ್ರು' ಸಿನಿಮಾ ಕಥೆಯಲ್ಲೂ ವಿಜಯಕುಮಾರ್ ಪಾತ್ರ ಇತ್ತು. ತಮಿಳುನಾಡಿನ ಜನರಿಗೆ ಕುಖ್ಯಾತ ಬವೇರಿಯಾ ಗ್ಯಾಂಗ್‌ಗಳ ಬಗ್ಗೆ ತಿಳಿದದ್ದು 2017ರಲ್ಲಿ ತೆರೆಕಂಡ ಇದೇ 'ತೀರನ್ ಅಧಿಗಾರಂ ಒಂಡ್ರು' ಚಿತ್ರದ ಮೂಲಕ. 2015ರಲ್ಲಿ ಡಕಾಯಿತರು ಶಾಸಕ ಸುದರ್ಶನಂ ಭೀರಕವಾಗಿ ಕೊಲೆ ಮಾಡಿದ್ದರು. ಈ ಹತ್ಯೆಯ ಆರೋಪಿಗಳನ್ನು ಬಂಧಿಸಲು ಅಂದಿನ ಡಿಜಿಪಿ ಎಸ್‌ಆರ್ ಜಂಗಿದ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ವಿಜಯಕುಮಾರ್ ಪಾತ್ರವೂ ಇತ್ತು. ಹರಿಯಾಣ ಮತ್ತು ರಾಜಸ್ಥಾನದವರೆಗೆ ಹೋಗಿ ಬಂಧಿಸಲಾಗಿತ್ತು.
ಇದನ್ನೂ ಓದಿ: DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್ ಆತ್ಮಹತ್ಯೆ