ರಾಮನಗರ(ಉತ್ತರಾಖಂಡ): ಜನವಸತಿ ಪ್ರದೇಶದಲ್ಲಿ ಹುಲಿಯೊಂದು ಹಠಾತ್ ಪ್ರತ್ಯಕ್ಷವಾಗಿ ಯುವಕನ ಮುಂದೆಯೇ ಮಿಂಚಿನಂತೆ ಹಾದು ಹೋದ ಘಟನೆ ಉತ್ತರಾಖಂಡ್ನಲ್ಲಿ ಇಂದು ಬೆಳಿಗ್ಗೆ ನಡೆಯಿತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕ ಹುಲಿ ಕಂಡು ಬೆಚ್ಚಿಬಿದ್ದಿದ್ದು, ಎರಡು ಹೆಜ್ಜೆ ಹಿಂದಿಟ್ಟು ಸಂಭವನೀಯ ದಾಳಿಯಿಂದ ಬಚಾವ್ ಆಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಮತ್ತು ರಾಮನಗರ ಅರಣ್ಯ ವಿಭಾಗಕ್ಕೆ ಹೊಂದಿಕೊಂಡಿರುವ ಗಾರ್ಜಿಯಾ ದೇವಸ್ಥಾನ ಸಮೀಪದ ರಾಷ್ಟ್ರೀಯ ಹೆದ್ದಾರಿ 309ರಲ್ಲಿ ಹುಲಿ ಕಾಣಿಸಿಕೊಂಡಿದೆ. ಇದೇ ರಸ್ತೆಯಲ್ಲಿ ಯುವಕ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹುಲಿ ಕಂಡು ಗಾಬರಿಯಾದ ಆತ ಹಿಂದಕ್ಕೆ ಸರಿಯುತ್ತಾನೆ. ಆಗ ಹುಲಿ ತನ್ನಷ್ಟಕ್ಕೆ ತಾನು ರಸ್ತೆ ದಾಟಿಕೊಂಡು ಅರಣ್ಯದಲ್ಲಿ ಮರೆಯಾಗುತ್ತದೆ. ಘಟನೆಯಿಂದ ಯುವಕ ನಿಟ್ಟುಸಿರುಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಹೆಚ್ಚಿದ ಹುಲಿ, ಚಿರತೆಗಳ ಹಾವಳಿ: ರಾಮನಗರ ಅರಣ್ಯ ವಿಭಾಗದ ಜನವಸತಿ ಪ್ರದೇಶದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಕಾಡುಪ್ರಾಣಿಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೀಗ ಹಗಲು ಹೊತ್ತಲ್ಲೇ ಹುಲಿ ಕಾಣಿಸಿಕೊಂಡು, ರಸ್ತೆಗೆ ಬಂದಿರುವುದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಯದ ವಾತಾವರಣ ಉಂಟುಮಾಡಿದೆ.
ಈ ಬಗ್ಗೆ ರಾಮನಗರ ಅರಣ್ಯ ವಿಭಾಗದ ಡಿಎಫ್ಒ ದಿಗಂತ್ ನಾಯಕ್ ಪ್ರತಿಕ್ರಿಯಿಸಿ, ವನ್ಯಜೀವಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ರಸ್ತೆಯಲ್ಲಿ ಇಂದು ಹುಲಿ ಕಾಣಿಸಿಕೊಂಡು ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ''ಗಾರ್ಜಿಯಾ ದೇವಸ್ಥಾನ ಸಮೀಪದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಇದರ ದೃಶ್ಯಗಳು ದೇವಸ್ಥಾನ ಸಮಿತಿಯವರು ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಬೆಳಿಗ್ಗೆ 7 ಗಂಟೆ ಸುಮಾರಿಗೆ ಹುಲಿ ರಸ್ತೆಯನ್ನು ಹಾದು ಹೋಗಿದೆ. ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸುವುದರೊಂದಿಗೆ ಹುಲಿ ಓಡಾಟದ ಮೇಲೆ ನಿರಂತರ ನಿಗಾ ಇಡುತ್ತಿದ್ದೇವೆ'' ಎಂದು ಹೇಳಿದರು.
ಪ್ರವಾಸಿಗರಿಗೆ ಎಚ್ಚರಿಕೆ: ಮುಂದುವರೆದು ಮಾತನಾಡಿ, ''ಅರಣ್ಯ ವಿಭಾಗದಲ್ಲಿ ಬರುವ ಪ್ರವಾಸಿಗರಿಗೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಆ ಭಾಗದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ವಾಹನಗಳು ನಿಲ್ಲಿಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ರಾಮನಗರ ಅಪರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ'' ಎಂದು ಡಿಎಫ್ಒ ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು: ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಹುಲಿ ಓಡಾಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ