ಭಾಗಲ್ಪುರ್ (ಬಿಹಾರ) : ಭಾಗಲ್ಪುರದ ರೈಲಿನಲ್ಲಿ ಮಹಿಳೆಯೊಬ್ಬರ ಪರ್ಸ್ವೊಂದನ್ನು ಕದ್ದ ಕಳ್ಳನನ್ನು ಪ್ರಯಾಣಿಕರು ಹಿಡಿದಿದ್ದಾರೆ. ಚಲಿಸುತ್ತಿದ್ದ ರೈಲಿನ ಕಿಟಕಿಯಲ್ಲಿ ಕಳ್ಳ ನೇತಾಡುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಿಟಕಿಯಲ್ಲಿ ನೇತಾಡುತ್ತಿರುವ ಕಳ್ಳ : ರೈಲಿನ ಕಿಟಕಿಯಲ್ಲಿ ನೇತಾಡುತ್ತಿರುವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ರೈಲಿನಲ್ಲಿ ಪರ್ಸ್ ಕದಿಯುತ್ತಿದ್ದಾಗ ಜನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಚಲಿಸುತ್ತಿದ್ದ ರೈಲಿನ ಕಿಟಕಿಗೆ ಕಳ್ಳ ನೇತುಹಾಕಿಕೊಂಡಿದ್ದರಿಂದ ಜನ ಅವನಿಗೆ ಥಳಿಸುತ್ತಲೇ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಸ್ತವವಾಗಿ, ರೈಲಿನಲ್ಲಿ ಒಬ್ಬ ಮಹಿಳೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿರುವ ಕಳ್ಳ ಕ್ಷಣಮಾತ್ರದಲ್ಲಿಯೇ ಆ ಪರ್ಸ್ ಕಸಿದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರು ಕಳ್ಳನನ್ನು ಹಿಡಿದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ವೈರಲ್ ಆಗುತ್ತಿರುವ ವಿಡಿಯೋ : ಚಲಿಸುತ್ತಿದ್ದ ರೈಲಿನ ಕಿಟಕಿಯಲ್ಲಿ ಕಳ್ಳ ನೇತಾಡುತ್ತಿರುವ ದೃಶ್ಯವನ್ನು ಕೆಲವು ಪ್ರಯಾಣಿಕರು ತಮ್ಮ ಫೋನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಬಗ್ಗೆ ಭಾಗಲ್ಪುರ ರೈಲ್ವೇ ಆರ್‌ಪಿಎಫ್ ಇನ್ಸ್ಪೆಕ್ಟರ್ ರಣಧೀರ್ ಕುಮಾರ್ ಅವರನ್ನು ಭೇಟಿ ಮಾಡಿದಾಗ, ಅಂತಹ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ, ನಾವು ತನಿಖೆ ನಡೆಸುತ್ತಿದ್ದೇವೆ, ನಾವು ಜಿಆರ್‌ಪಿಯೊಂದಿಗೆ ಮಾತನಾಡುತ್ತಿದ್ದೇವೆ. ಅಂತಹ ಕೆಲವು ಪ್ರಕರಣಗಳು ನಮ್ಮ ಬಳಿಗೆ ಬಂದಿವೆ. ಈ ಬಗ್ಗೆ ಗಮನಿಸಿ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.
ಈ ಹಿಂದೆಯೂ ಇಂತಹ ಘಟನೆ ನಡೆದಿದೆ : ಒಂದು ವರ್ಷದ ಹಿಂದೆ ಭಾಗಲ್ಪುರದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ಕಳ್ಳನೊಬ್ಬ ವ್ಯಕ್ತಿಯೊಬ್ಬರ ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು, ರೈಲಿನ ಕಿಟಕಿಗೆ ನೇತುಹಾಕಿಕೊಂಡಿದ್ದ. ಭಾಗಲ್ಪುರ್-ಜಮಾಲ್ಪುರ್-ಪೀರ್ಪೈಂಟಿ ಮಾರ್ಗದಲ್ಲಿ ಇದು ಸಾಮಾನ್ಯವಾಗಿದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಕಳ್ಳ ಸಿಕ್ಕಿಬಿದ್ದರೆ ವಿಡಿಯೋ ವೈರಲ್ ಆಗುತ್ತೆ. ಇಲ್ಲದಿದ್ದರೆ ಜನಕ್ಕೆ ಗೊತ್ತಾಗೋದೇ ಇಲ್ಲ.
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದ ಕಳ್ಳ (ಪ್ರತ್ಯೇಕ ಸುದ್ದಿ) : ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದ ವ್ಯಕ್ತಿ ಅಂಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ನಗರ ಗಂಗಮ್ಮ ಗುಡಿ ರಸ್ತೆಯ ಕೇಸರಿ ಜ್ಯುವೆಲರ್ಸ್ನಲ್ಲಿ (ನವೆಂಬರ್ 30-23) ನಡೆದಿತ್ತು. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಜ್ಯುವೆಲರ್ಸ್ ಮಾಲೀಕ ಕಿರಣ್ ಮನೆಗೆ ಊಟಕ್ಕೆ ಹೋಗಲು ಪತ್ನಿಯನ್ನು ಅಂಗಡಿಯಲ್ಲಿ ಕೂರಿಸಿದ್ದರು. ಈ ವೇಳೆ, ಹಿಂದಿಯಲ್ಲಿ ಮಾತನಾಡಿಕೊಂಡು ಗ್ರಾಹಕರ ಸೋಗಿನಲ್ಲಿ ಬಂದ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ, ಮಗುವಿಗೆ ಉಂಗುರ ತೋರಿಸಿ ಎಂದು ಹಲವು ಚಿನ್ನದ ಉಂಗುರಗಳನ್ನು ತೆಗೆಸಿದ್ದ. ಅದು ಬೇಡ, ಇದು ಬೇಡ ಅಂತೆಲ್ಲ ಯಾಮಾರಿಸಿ 25 ಗ್ರಾಂನಷ್ಟು ಮಾಂಗಲ್ಯ ಸರಕ್ಕೆ ಬಳಸುವ ಚಿನ್ನದ ಗುಂಡುಗಳಿದ್ದ ಕವರ್ ಅನ್ನು ಕ್ಷಣಾರ್ಧದಲ್ಲಿ ತೆಗೆದು ಜೇಬಿಗಿಳಿಸಿದ್ದ. ನಂತರ ಇತರ ಗ್ರಾಹಕರು ಬರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದ ಕಳ್ಳ- ಸಿಸಿಟಿವಿ ದೃಶ್ಯ