ಮುಂಬೈ/ರಿಷಿಕೇಶ್: ಮಹಾರಾಷ್ಟ್ರದ ಮುಂಬೈನಿಂದ ರಿಷಿಕೇಶಕ್ಕೆ ತೆರಳಿದ್ದ ಐವರಲ್ಲಿ ಇಬ್ಬರು ಯುವತಿಯರು ಹಾಗೂ ಒಬ್ಬ ಯುವಕ ಗಂಗಾ ನದಿಯಲ್ಲಿ ತೇಲಿ ಹೋಗಿರುವ ಘಟನೆ ನಡೆದಿದ್ದು, ಎರಡು ದಿನಗಳಿಂದ ಶೋಧಕಾರ್ಯ ನಡೆಸುತ್ತಿದ್ದರೂ ಇವರ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ. ಇದರ ಮಧ್ಯೆ ಗಂಗಾನದಿಯಲ್ಲಿ ಅವರು ಮೋಜು-ಮಸ್ತಿ ಮಾಡುತ್ತಿದ್ದ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ಬುಧವಾರದಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಗಂಗಾ ನದಿಯಲ್ಲಿ ಮೋಜು-ಮಸ್ತಿ ಮಾಡ್ತಿದ್ದ ಸಂದರ್ಭದಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿದೆ. ಈ ವೇಳೆ, ನೀರಿನಿಂದ ಹೊರಗೆ ಬಾರದೇ ಆಟವಾಡುತ್ತಿದ್ದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿರಿ: ಬೆಳ್ಳಿ ಗೆದ್ದರೂ 'ಚಿನ್ನ'ದಂತಹ ಮನಸು... ಟ್ರಕ್ ಡ್ರೈವರ್ಗಳಿಗೆ ಈ ರೀತಿ ಕೃತಜ್ಞತೆ ಹೇಳಿದ ಮೀರಾ!
ಮುಂಬೈನ ಬೋರಿವಲಿ ನಿವಾಸಿ ಮಧುಶ್ರೀ ತನ್ನ ನಾಲ್ವರು ಸ್ನೇಹಿತರೊಂದಿಗೆ ರಿಷಿಕೇಶಕ್ಕೆ ತೆರಳಿದ್ದಳು. ಗಂಗಾ ನದಿಯಲ್ಲಿ ಆಕೆಯ ಸ್ನೇಹಿತರೊಂದಿಗೆ ಸ್ನಾನ ಮಾಡ್ತಿದ್ದಾಗ, ಸ್ನೇಹಿತೆಯೊಬ್ಬಳು ವಿಡಿಯೋ ಮಾಡಿದ್ದಾರೆ. ಐವರು ಸ್ನೇಹಿತರ ಪೈಕಿ ಅಪೂರ್ವಳು ನೀರಿನಲ್ಲಿದ್ದ ಸಂದರ್ಭದಲ್ಲಿ ಆಕೆಯ ಕಾಲು ಜಾರಿರುವ ಕಾರಣ ಮಧುಶ್ರೀ ಹಾಗೂ ಇನ್ನೋರ್ವ ಸ್ನೇಹಿತ ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಆದರೆ ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಇತರರು ಅವರ ಸಹಾಯಕ್ಕೆ ಮುಂದಾದರೂ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಅವರು ಉಳಿದುಕೊಂಡಿದ್ದ ಹೋಟೆಲ್ಗೆ ಮಾಹಿತಿ ನೀಡಲಾಗಿದೆ.
ಕುಟುಂಬಸ್ಥರು ತಿಳಿಸಿರುವ ಪ್ರಕಾರ ಮಕ್ಕಳು ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡಲು ಅಮೆರಿಕಕ್ಕೆ ಹೋಗುತ್ತಿದ್ದರು. ಇದಕ್ಕೂ ಮೊದಲು ಹರಿದ್ವಾರ ಹಾಗೂ ರಿಷಿಕೇಶ್ ದೇವಸ್ಥಾನ ನೋಡಲು ತೆರಳಿದ್ದರು. ಮಧುಶ್ರೀ, ಅಪೂರ್ವ ಹಾಗೂ ಮೆಲ್ರಾಯ್ ನೀರಿನಲ್ಲಿ ತೇಲಿ ಹೋಗಿದ್ದು, ನಿಶಾ ಹಾಗೂ ಕರಣ್ ಬದುಕುಳಿದಿದ್ದಾರೆ.
ಎಸ್ಡಿಆರ್ಎಫ್ ತಂಡ ಕಳೆದ ಎರಡು ದಿನಗಳಿಂದ ಶೋಧಕಾರ್ಯ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.