ಕನೌಜ್(ಉತ್ತರಪ್ರದೇಶ) : ಮನುಷ್ಯನ ಹುಟ್ಟಿನಷ್ಟೇ ಸಾವಿಗೂ ಮಹತ್ವ ನೀಡಲಾಗುತ್ತದೆ. ಮೃತದೇಹವನ್ನು ಸಹ ಮಾನವೀಯವಾಗಿ ಕಾಣುವುದು ಅತಿ ಮುಖ್ಯವಾಗುತ್ತದೆ. ಆದರೆ, ಉತ್ತರ ಪ್ರದೇಶ ಪೊಲೀಸರ ಈ ಅಮಾನವೀಯ ಕೃತ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಇಲ್ಲಿನ ಕನೌಜ್ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಿಂದ, ಅಪರಿಚಿತ ವಯಸ್ಸಾದ ವ್ಯಕ್ತಿಯ ಮೃತದೇಹವನ್ನು ಪೊಲೀಸರು ನೆಲದ ಮೇಲೆ ಎಳೆದುಕೊಂಡು ಹೋಗುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಯೋವೃದ್ಧನ ಮೃತದೇಹವನ್ನು ಸ್ಟ್ರೆಚರ್ ಮೇಲೆ ತೆಗೆದುಕೊಂಡು ಹೋಗುವ ಬದಲು ನೆಲದ ಮೇಲೆ ಎಳೆದೊಯ್ಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ, 60 ವರ್ಷದ ಅಪರಿಚಿತ ವೃದ್ಧನನ್ನು ಗಾಯಗೊಂಡ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ವೈದ್ಯರು ವಯೋವೃದ್ಧನನ್ನು ತಿರ್ವಾ ಪಟ್ಟಣದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಹೇಳಿದರು. ಆಗಸ್ಟ್ 8ರಂದು, ವೃದ್ಧನನ್ನು ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಅಲ್ಲಿ ಆಗಸ್ಟ್ 15ರಂದು ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಆಗಸ್ಟ್ 16ರಂದು, ಮರಣೋತ್ತರ ಪರೀಕ್ಷೆಗೆ ಶವವನ್ನು ತೆಗೆದುಕೊಂಡು ಹೋಗುವಾಗ ಅಮಾನವೀಯತೆ ಮೆರೆದಿದ್ದಾರೆ. ಮೃತ ದೇಹವನ್ನು ಸ್ಟ್ರೆಚರ್ ಮೇಲೆ ಒಯ್ಯುವ ಬದಲು, ಪೊಲೀಸರು ಅದನ್ನು ಶವಾಗಾರದಿಂದ ಚೀಲದಲ್ಲಿ ಇಟ್ಟು, ನೆಲದ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಪ್ರಶಾಂತ್ ವರ್ಮಾ ಹೇಳಿದ್ದಾರೆ.
ಓದಿ : ದಲಿತ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಕೇಸ್: ದೆಹಲಿ ಪೊಲೀಸರಿಂದ ತನಿಖೆಯ ವರದಿ ಕೇಳಿದ ಹೈಕೋರ್ಟ್