ಗೋರಖ್‌ಪುರ(ಉತ್ತರ ಪ್ರದೇಶ): ಇಲ್ಲಿನ ಪಂಡಿತ್ ದೀನದಯಾಳ್ ಉಪಾಧ್ಯಾಯ ಗೋರಖ್‌ಪುರ ವಿಶ್ವವಿದ್ಯಾಲಯದಲ್ಲಿ (ಡಿಡಿಯು) ಭ್ರಷ್ಟಾಚಾರ, ಅರಾಜಕತೆ ಮತ್ತು ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕುಲಪತಿ ಮತ್ತು ರಿಜಿಸ್ಟ್ರಾರ್ ಅವರನ್ನು ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಥಳಿಸಿದ್ದಾರೆ. ತಡೆಯಲು ಬಂದ ಪೊಲೀಸರು ಪ್ರತಿಭಟನಾಕಾರರ ಮಧ್ಯೆ ತೀವ್ರ ಘರ್ಷಣೆ ಏರ್ಪಟ್ಟಿತು.
ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅರಾಜಕತೆ ಮತ್ತು ವಿವಿಧ ಶುಲ್ಕಗಳ ಹೆಚ್ಚಳವನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ವಾರದ ಹಿಂದೆ ನಡೆದ ಧರಣಿಯಲ್ಲೂ ಗಲಾಟೆ ಉಂಟಾಗಿ 6 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಇದು ಸಂಘಟನೆಯನ್ನು ಕೆರಳಿಸಿತ್ತು.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸಿಟ್ಟು ಸ್ಫೋಟಗೊಂಡಿದೆ. ತಮ್ಮ ಮನವಿಯಲ್ಲಿ ಆಲಿಸಿದ ವಿವಿ ಕುಲಪತಿ ಮತ್ತು ರಿಜಿಸ್ಟ್ರಾರ್ ವಿರುದ್ಧ ಘೋಷಣೆ ಕೂಗಿದರು. ಶುಲ್ಕ ಹೆಚ್ಚಳ, ವಿದ್ಯಾರ್ಥಿಗಳ ಅಮಾನತು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಇದ್ಯಾವುದಕ್ಕೂ ಸೊಪ್ಪು ಹಾಕದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ಕೈಗೆ ಸಿಕ್ಕ ಚಾನ್ಸಲರ್ ಮತ್ತು ರಿಜಿಸ್ಟ್ರಾರ್ ಮೇಲೆ ಹಲ್ಲೆ ನಡೆಸಿದರು.
ವಿವಿ ಚಾನ್ಸಲರ್ರನ್ನು ವಿದ್ಯಾರ್ಥಿಗಳು, ಎಬಿವಿಪಿ ಮುಖಂಡರು ಕುತ್ತಿಗೆ ಹಿಡಿದು ಎಳೆದಾಡಿದ್ದಾರೆ. ಪೊಲೀಸರು, ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿಗಳ ಸಿಟ್ಟಿನ ಮುಂದೆ ಇದು ಸಾಕಾಗಲಿಲ್ಲ. ಬಳಿಕ ರಿಜಿಸ್ಟ್ರಾರ್ ರನ್ನು ಕೆಳಗೆ ಕೆಡವಿ ಕಾಲಿನಿಂದ ಒದೆಯುತ್ತಿರುವುದು ಕಂಡು ಬಂತು. ಹೇಗೋ ಮಾಡಿ ಕುಲಪತಿಯನ್ನು ಅವರ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಪ್ರತಿಭಟನಾಕಾರರಿಂದ ತಪ್ಪಿಸಿ ಅವರ ಕಚೇರಿಗೆ ಕರೆದೊಯ್ದರು. ಬಳಿಕ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಕೂಡ ನಡೆಯಿತು.
ವಿಷಾದದ ಸಂಗತಿಯೆಂದರೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರನ್ನು ವಿದ್ಯಾರ್ಥಿಗಳು ಭೀಕರವಾಗಿ ಥಳಿಸಿದ್ದಾರೆ. ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದರು. ಹರಸಾಹಸಪಟ್ಟು ಭದ್ರತಾ ಸಿಬ್ಬಂದಿ ಅವರನ್ನು ಕಚೇರಿಯ ಲಿಫ್ಟ್‌ನಿಂದ ರಕ್ಷಿಸಿ ಕರೆದೊಯ್ದಿದ್ದಾರೆ.
ಪೊಲೀಸ್- ಪ್ರತಿಭಟನಾಕಾರರ ಸಂಘರ್ಷ: ಪ್ರತಿಭಟನೆಯಲ್ಲಿ ವಿವಿ ಕುಲಪತಿ, ರಿಜಿಸ್ಟ್ರಾರ್ ಅಲ್ಲದೇ, ಪೊಲೀಸರ ಮೇಲೂ ಹಲ್ಲೆ ನಡೆಸಿದ ಪ್ರಸಂಗ ಕೂಡ ನಡೆಯಿತು. ವಿದ್ಯಾರ್ಥಿಗಳನ್ನು ತಡೆಯುತ್ತಿದ್ದಾಗ ತೀವ್ರ ನಡೆದ ನೂಕಾಟ, ತಳ್ಳಾಟದಲ್ಲಿ ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೆಲ ಪೊಲೀಸರು ನೆಲಕ್ಕೆ ಬಿದ್ದರು. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಘಟನೆ ಇದಾಗಿದೆ.
ಪ್ರಕರಣ ದಾಖಲು, ಬಂಧನ: ಇನ್ನು ವಿವಿಯಲ್ಲಿ ನಡೆದ ಆಘಾತಕಾರಿ ಘಟನೆ ವಿರುದ್ಧ ದೂರು ದಾಖಲಿಸಲಾಗಿದೆ. ಕ್ಯಾಂಟ್ ಠಾಣೆ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಂಡಿದ್ದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಮತದಾನಕ್ಕೂ ಮೊದಲೇ ಸಭಾತ್ಯಾಗ ಮಾಡಿದ ವಿಪಕ್ಷಗಳ ಸದಸ್ಯರು.. ಛತ್ತೀಸ್ಗಢ ಸಿಎಂ ವಿರುದ್ಧದ 'ಅವಿಶ್ವಾಸ'ಕ್ಕೆ ಸೋಲು