ನವದೆಹಲಿ: ಕೊರೊನಾ ಹಿನ್ನೆಲೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಅಸಮಾಧಾನ ಹೊರಹಾಕಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, ಸರ್ಕಾರಗಳು ತಮ್ಮ ನಿರ್ಧಾರವನ್ನು ಪುನರ್ಪರಿಶೀಲನೆ ಮಾಡಿ ಕೋವಿಡ್ ಮಾನದಂಡಗಳೊಂದಿಗೆ ಕನ್ವರ್ ಯಾತ್ರೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕನ್ವರ್ ಯಾತ್ರೆ ಹಿಂದೂಗಳಿಗೆ ಬಹಳ ಮುಖ್ಯವಾದ ಧಾರ್ಮಿಕ ಯಾತ್ರೆ, ಅದು ದೇಶದ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಕೊರೊನಾ ನಿಯಮಗಳನ್ನು ಅನುಸರಿಸಬೇಕು. ಆದರೆ ಯಾತ್ರೆಯನ್ನು ನಿಷೇಧಿಸುವುದು ಸರಿಯಲ್ಲ. ಹೀಗಾಗಿ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಯಾತ್ರೆಗೆ ಅವಕಾಶ ನೀಡುವಂತೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಜೈನ್ ಮನವಿ ಮಾಡಿಕೊಂಡಿದ್ದಾರೆ.
ಜನರ ಧಾರ್ಮಿಕ ನಂಬಿಕೆಯನ್ನು ನಿಗ್ರಹಿಸುವ ಬದಲು, ರಾಜ್ಯ ಸರ್ಕಾರಗಳು ಮತ್ತು ಸುಪ್ರೀಂ ಕೋರ್ಟ್ ಭವಿಷ್ಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಕರಿಛಾಯೆ: ಯುಪಿಯಲ್ಲಿ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್ ಯಾತ್ರೆಗೆ ಬ್ರೇಕ್
ಕನ್ವರ್ ಸಂಘಗಳ (ಸಂಘಟನೆಗಳು) ಜೊತೆ ಮಾತುಕತೆ ನಡೆಸಿದ ನಂತರ ಉತ್ತರ ಪ್ರದೇಶ ಸರ್ಕಾರ ಕನ್ವರ್ ಯಾತ್ರೆ ರದ್ದು ಮಾಡಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ, ಸಂಘಟನೆಗಳು ಶನಿವಾರ ಯಾತ್ರೆಯನ್ನು ರದ್ದುಗೊಳಿಸಲು ನಿರ್ಧರಿಸಿದವು. ಉತ್ತರಾಖಂಡ ಸರ್ಕಾರ ಸಹ ಮಂಗಳವಾರ ಯಾತ್ರೆ ರದ್ದುಗೊಳಿಸಲು ನಿರ್ಧರಿಸಿದೆ. ಜುಲೈ 25 ರಿಂದ ಇದು ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ನಿಷೇಧ ಹೇರಲಾಗಿದೆ.