ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿವಾಸಕ್ಕೆ ದೆಹಲಿ ಪೊಲೀಸರು ರವಿವಾರ ಭೇಟಿ ನೀಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಪೊಲೀಸರ ಈ ಕ್ರಮವು ಕೇಂದ್ರ ಸರ್ಕಾರದ ಬೆದರಿಕೆಯ ರಾಜಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ. ಇದೇ ವೇಳೆ ಪೊಲೀಸರು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಶ್ರೀನಗರದಲ್ಲಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಕಳೆದ ಗುರುವಾರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರ ಭಾಗವಾಗಿ ಇಂದು ರಾಹುಲ್ ನಿವಾಸಕ್ಕೆ ಪೊಲೀಸರು ತೆರಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ''ರಾಹುಲ್ ಗಾಂಧಿ ನೋಟಿಸ್ಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಸುಮಾರು 10 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ ಇಂದು ಮತ್ತೆ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಅಷ್ಟೊಂದು ಆತುರವೇನು'' ಎಂದು ಪ್ರಶ್ನಿಸಿದ್ದಾರೆ.
''ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವಯನಾಡ್ ಸಂಸದರನ್ನು ಪ್ರಶ್ನಿಸುವಂತಹ ಅಧಿಕಾರ ದೆಹಲಿ ಪೊಲೀಸರಿಗೆ ಇಲ್ಲ. ಹಾಗಾದರೆ, ಕಳೆದ 45 ದಿನಗಳಿಂದ ಪೊಲೀಸರು ಏನು ಮಾಡುತ್ತಿದ್ದರು'' ಎಂದೂ ಅವರು ಪ್ರಶ್ನೆ ಮಾಡಿದರು. ಅಲ್ಲದೇ, ''ಯಾತ್ರೆಯು ಸುಮಾರು 4000 ಕಿ.ಮೀ ಕ್ರಮಿಸಿ 12 ರಾಜ್ಯಗಳ ಮೂಲಕ ಸಾಗಿತ್ತು. ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನರನ್ನು ಭೇಟಿಯಾಗುತ್ತಾರೆ. ರಾಹುಲ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆಯರ ವಿವರಗಳನ್ನು ಪೊಲೀಸರು ಕೇಳುತ್ತಿದ್ದಾರೆ. ಸಾಮಾನ್ಯವಾಗಿ, ಒಬ್ಬ ನಾಯಕ ತಾಳ್ಮೆಯಿಂದ ಇಂತಹ ಕುಂದುಕೊರತೆಗಳನ್ನು ಆಲಿಸುತ್ತಾರೆ. ಈ ಬಗ್ಗೆ ವಿವರವಾದ ಪ್ರತಿಕ್ರಿಯೆಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುತ್ತೇವೆ'' ಎಂದು ಸಿಂಘ್ವಿ ಸ್ಪಷ್ಟನೆ ನೀಡಿದರು.
ಬಿಜೆಪಿಯವರೆಗೆ ನೋಟಿಸ್ ಕಳುಹಿಸಬಹುದೇ - ಗೆಹ್ಲೋಟ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ, ''ದೆಹಲಿ ಪೊಲೀಸರ ಕ್ರಮವು ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ತೋರಿಸುತ್ತೆ. ಲಂಡನ್ ಪ್ರವಾಸದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಇದನ್ನೇ ಹೇಳಿದ್ದರು'' ಎಂದರು.
''ಕೇಂದ್ರ ಸಚಿವರು ನಾಳೆ ರಾಜಸ್ಥಾನದಾದ್ಯಂತ ಪ್ರಯಾಣಿಸಿ, ಜನರನ್ನು ಭೇಟಿ ಮಾಡಿ ಮತ್ತು ಮಹಿಳೆಯರು ಕಿರುಕುಳಕ್ಕೊಳಗಾಗುವ ಬಗ್ಗೆ ಇದೇ ರೀತಿಯ ಅವಲೋಕನಗಳನ್ನು ಮಾಡಿದರೆ, ಏನು ಹೇಳಬೇಕು?, ರಾಜ್ಯ ಪೊಲೀಸರು ಬಿಜೆಪಿಯವರೆಗೆ ನೋಟಿಸ್ ಕಳುಹಿಸಬಹುದೇ?, ಬಿಜೆಪಿಯವರು ತಪ್ಪು ದಾರಿಯನ್ನು ತೋರಿಸುತ್ತಿದ್ದಾರೆ. ಮುಂದೆ ಅದು ಅವರ ವಿರುದ್ಧವೇ ತಿರುಗುತ್ತದೆ'' ಎಂದು ಗೆಹ್ಲೋಟ್ ಎಚ್ಚರಿಸಿದರು.
ಹಿರಿಯ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, "ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಧ್ವನಿ ಎತ್ತಿದ ಪರಿಣಾಮ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕೇಂದ್ರವು ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಆದರೆ, ನಾವು ಅದಾನಿ ವಿಷಯವನ್ನು ಪ್ರಸ್ತಾಪಿಸುತ್ತಲೇ ಇರುತ್ತೇವೆ'' ಎಂದು ಹೇಳಿದರು.
ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ''ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಮಹಿಳೆಯರು ತಮ್ಮನ್ನು ಭೇಟಿಯಾದ ಬಗ್ಗೆ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿಯೇ ದೆಹಲಿ ಪೊಲೀಸರು ಕಾನೂನು ವಿಧಾನವನ್ನು ಅನುಸರಿಸಿದ್ದಾರೆ. ಮಾಹಿತಿಯನ್ನು ಪಡೆಯಲು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಕಾಂಗ್ರೆಸ್ ಈಗ ಪೊಲೀಸರ ಕಾನೂನು ಕ್ರಮದ ಬಗ್ಗೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅಳುತ್ತಿದೆ'' ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. "ರಾಹುಲ್ ಗಾಂಧಿ ಅವರು ಮಹಿಳೆಯರನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದರು. ಮಹಿಳೆಯರು ಅತ್ಯಾಚಾರ ಮತ್ತು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ರಾಹುಲ್ ಹೇಳಿದ್ದರು. ಅವರಿಗೆ ನ್ಯಾಯ ಸಿಕ್ಕಿಲ್ಲ ಎಂಬ ಹೇಳಿಕೆ ಕುರಿತು ದೆಹಲಿ ಪೊಲೀಸರು ವಿವರಗಳನ್ನು ಕೇಳುತ್ತಿದ್ದಾರೆ. ಆದರೆ, ರಾಹುಲ್ ಹೇಳುತ್ತಿಲ್ಲ. ರಾಹುಲ್ ಆಗ ಸುಳ್ಳು ಹೇಳಲಿಲ್ಲ ಮತ್ತು ಇದನ್ನು ಖಾತ್ರಿಪಡಿಸುವಲ್ಲಿ ಅವರ ದುರ್ಬಲ ಬದ್ಧತೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ: ರಾಹುಲ್ ನಿವಾಸಕ್ಕೆ ದೆಹಲಿ ಪೊಲೀಸರ ಭೇಟಿ