ವಡೋದರಾ(ಗುಜರಾತ್): ವಡೋದರಾದಲ್ಲಿ 24 ವರ್ಷದ ಯುವತಿಯೊಬ್ಬಳು ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿರುವ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜೂನ್ 11ರಂದು ಕಲ್ಯಾಣ ಮಂಟಪದಲ್ಲಿ ಈ ಮದುವೆ ಸಮಾರಂಭ ಜರುಗಲಿದೆ. ಭಾರತದಲ್ಲೇ ಮೊದಲು ಎನ್ನುವಂತೆ ನಡೆಯುತ್ತಿರುವ ಈ ವಿವಾಹಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ ಎಂದು ತಿಳಿದುಬಂದಿದೆ.
ವಡೋದರಾ ನಗರದ ಸುಭಾನ್‌ಪುರ ಪ್ರದೇಶದಲ್ಲಿ ಈಗ ಈ ಸೆಲ್ಫ್ ಮ್ಯಾರೇಜ್ನದ್ದೇ ಸದ್ದು. ಮದುವೆಯ ಆಮಂತ್ರಣ ಪತ್ರಿಕೆ ಕೂಡ ವೈರಲ್ ಆಗಿದ್ದು, ಗೋತ್ರಿಯ ಹರಿನಗರ್ ಪ್ರದೇಶದ ಹರಿ ಹರಿ ಮಹಾದೇವ್ ಮಂದಿರದಲ್ಲಿ ಜೂನ್ 11ರಂದು ಮದುವೆ ನಡೆಯಲಿದೆ. ವಡೋದರಾ ನಗರದ ಯಾವುದೇ ದೇವಸ್ಥಾನಗಳಲ್ಲಿ ಈ ಹುಡುಗಿಯ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ವಡೋದರಾ ನಗರದ ಬಿಜೆಪಿ ಉಪಾಧ್ಯಕ್ಷರು ಹೇಳಿದ್ದಾರೆ. ಇವೆಲ್ಲದರ ಮಧ್ಯೆ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಹೌದು, ಯುವತಿ ತನ್ನನ್ನು ತಾನು ಕ್ಷಮಾ ಬಿಂದು ಎಂದು ಪರಿಚಯಿಸಿಕೊಂಡಿದ್ದು, ಆಧಾರ್ ಕಾರ್ಡ್‌ನಲ್ಲಿ ಆಕೆಯ ಹೆಸರು ದುಬೆ ಸೌಮ್ಯಾ ಅಂತಾ ಇದೆ.
ಇದನ್ನೂ ಓದಿ: ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್: ಗುಜರಾತ್ನಲ್ಲೊಂದು ಸೆಲ್ಫ್ ಮ್ಯಾರೇಜ್
ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸಿರುವ ಕ್ಷಮಾ ಬಿಂದುವಿನ ಸೆಲ್ಫ್ ಮ್ಯಾರೇಜ್ ವಿಚಾರಕ್ಕೆ ಬಹುತೇಕ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ಆಧಾರ್ ಕಾರ್ಡ್‌ನಲ್ಲಿ ದುಬೆ ಸೌಮ್ಯಾ ಎಂದು ಹೆಸರನ್ನು ಬರೆಯಲಾಗಿದೆ. ಹೀಗಿರುವಾಗ ಆಕೆ ತನ್ನ ಗುರುತನ್ನು ಏಕೆ ಮರೆಮಾಚಿದ್ದಾಳೆ ಎಂಬುದೇ ಪ್ರಶ್ನೆ. ಅಥವಾ ಸೌಮ್ಯ ಅಲಿಯಾಸ್ ಕ್ಷಮಾ ಆಗಿರಬಹುದೇ ಎಂದು ಕೂಡ ಪ್ರಶ್ನೆ ಉದ್ಭವವಾಗಿದೆ. ಈ ಕುರಿತು ತನಿಖೆ ನಡೆಸಿದರೆ ನಿಶಾಂಶ ಹೊರಬರಲಿದೆ.