ಉತ್ತರಕಾಶಿ(ಉತ್ತರಾಖಂಡ): ಸಿಲ್ಕ್ಯಾರಾ ಸುರಂಗದೊಳಗೆ ಪ್ರಾಣಭಯದಲ್ಲಿ ಸಿಲುಕಿರುವ 41 ಕಾರ್ಮಿಕರಿಗೆ ಭರವಸೆ ನೀಡುವ ಮತ್ತು ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸ್ಥಿರ ದೂರವಾಣಿ ಸೌಲಭ್ಯ ಒದಗಿಸಲು ಮುಂದಾಗಿದೆ. ಈ ಮೂಲಕ ಅವರು ತಮ್ಮ ಕುಟುಂಬಗಳೊಂದಿಗೆ ಮಾತನಾಡಬಹುದು.
ಈ ಕುರಿತು ಮಾತನಾಡಿರುವ ಬಿಎಸ್‌ಎನ್‌ಎಲ್ ಅಧಿಕಾರಿ ಕುಂದನ್, "ಸುರಂಗದ ಒಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರಿಗೆ ಪೈಪ್ ಮೂಲಕ ಸಣ್ಣ ಲ್ಯಾಂಡ್‌ಲೈನ್ ಫೋನ್ ಕಳುಹಿಸುವ ಕಾರ್ಯ ಪ್ರಕ್ರಿಯೆಯಲ್ಲಿದೆ. ಈ ಮೂಲಕ ತಮ್ಮ ಕುಟುಂಬದವರೊಂದಿಗೆ ಅವರು ನೇರವಾಗಿ ಮಾತನಾಡಲು ಸಾಧ್ಯವಾಗುತ್ತದೆ" ಎಂದರು.
"ಸುರಂಗ ಮಾರ್ಗದಲ್ಲಿ ಬಿಎಸ್‌ಎನ್‌ಎಲ್ ಸಣ್ಣ ದೂರವಾಣಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದು, ಲೈನ್ ಮೂಲಕ ಫೋನ್ ಸಂಪರ್ಕ ಕಲ್ಪಿಸಲಾಗುವುದು. ಸಿಕ್ಕಿಬಿದ್ದ ಕಾರ್ಮಿಕರಿಗೆ ವಿಡಿಯೋ ಗೇಮ್‌ಗಳನ್ನು ಆಡಲು ಕೆಲವು ಮೊಬೈಲ್ ಫೋನ್‌ಗಳನ್ನೂ ಸಹ ಕಳುಹಿಸಲಾಗಿದೆ" ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
"ಸಮೀಪದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲ. ಹಾಗಾಗಿ, ವೈ ಫೈ ಸಂಪರ್ಕವನ್ನು ಒದಗಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಕೆಲಸಗಾರರಿಗೆ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಒದಗಿಸುವ ಬಗ್ಗೆಯೂ ನಾವು ಗಮನಹರಿಸುತ್ತಿದ್ದೇವೆ. ಅಲ್ಲಿ ಸಾಕಷ್ಟು ಸ್ಥಳ ಇರುವುದರಿಂದ ಅವರು ಕ್ರಿಕೆಟ್ ಆಡಬಹುದು" ಎಂದು ಹೇಳಿದರು.
ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗ ಕುಸಿತ : ಕ್ರಿಸ್‌ಮಸ್ ವೇಳೆ ಕಾರ್ಮಿಕರು ಮನೆ ಸೇರುವ ವಿಶ್ವಾಸವಿದೆ - ಅರ್ನಾಲ್ಡ್ ಡಿಕ್ಸ್
ಈ ಮಧ್ಯೆ ಕಾರ್ಮಿಕರ ಕುಟುಂಬಸ್ಥರು ರಕ್ಷಣಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ದೂರಿದ್ದಾರೆ. ಆರು ಇಂಚು ಅಗಲದ ಪೈಪ್‌ಲೈನ್ ಮೂಲಕ ಆಹಾರ, ಔಷಧಿಗಳು ಮತ್ತಿತರೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಕಾರ್ಮಿಕರು ಅವರ ಕುಟುಂಬ ಸದಸ್ಯರೊಂದಿಗೆ ನಿತ್ಯ ಮಾತನಾಡುತ್ತಿದ್ದಾರೆ.
ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್ ಧಾಮ್ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್ ಸಂಚರಿಸುವುದನ್ನು ಕಡಿಮೆಗೊಳಿಸಲು ಈ ಸುರಂಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್ ದೂರದ ಸುರಂಗ ನಿರ್ಮಾಣದ ವೇಳೆ ನವೆಂಬರ್ 12ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುಮಾರು 150 ಮೀಟರ್ ಉದ್ದದ ಸುರಂಗ ಕುಸಿದಿದ್ದು,ಸಾಕಷ್ಟು ಅಡೆತಡೆಗಳ ನಡುವೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ