ಡೆಹ್ರಾಡೂನ್ (ಉತ್ತರಾಖಂಡ): ಕೊರೊನಾ ಬಲೆಯಿಂದ ಬಿಡಿಸಿಕೊಂಡು ಬದುಕಿದೆವು ಎಂದು ನಿಟ್ಟುಸಿರು ಬಿಟ್ಟ ಜನರು ಇದೀಗ ಮತ್ತೆ ಆಸ್ಪತ್ರೆಯೆಡೆ ಮುಖ ಮಾಡುತ್ತಿದ್ದಾರೆ. ಉತ್ತರಾಖಂಡ ರಾಜ್ಯದಲ್ಲಿ ವೈರಸ್ನಿಂದ ಚೇತರಿಸಿಕೊಂಡ ಶೇ.10ರಷ್ಟು ಮಂದಿ ಕೋವಿಡೇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾದವರು ಕಪ್ಪು, ಬಳಿ, ಹಳದಿಯಂತಹ ಶಿಲೀಂಧ್ರಗಳ ಸೋಂಕಿಗೆ ತುತ್ತಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಉತ್ತರಾಖಂಡ, ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಚೇತರಿಕೆ ಬಳಿಕ ಜನರು ಬ್ಲಾಕ್ ಫಂಗಸ್ ಜೊತೆಗೆ ಶ್ವಾಸಕೋಶದ ಸೋಂಕು, ಎದೆ ನೋವು, ನಿರಂತರ ಕೆಮ್ಮು, ಜ್ವರ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಕೋವಿನ್ ಲಸಿಕೆ ಪ್ರಮಾಣಪತ್ರ ಅಂತಾರಾಷ್ಟ್ರೀಯ ಪ್ರಯಾಣಿಕರ ಪಾಸ್‌ಪೋರ್ಟ್‌ಗೆ ಲಿಂಕ್
ಕೋವಿಡ್ 2ನೇ ಅಲೆಯು ಹೆಚ್ಚು ಗಂಭೀರವಾಗಿದ್ದು, ಗುಣಮುಖರಾದ ಮೇಲೆ ಕೆಲವರಿಗೆ ಆಮ್ಲಜನಕದ ಬೆಂಬಲ ಬೇಕಾಗುತ್ತಿದೆ. ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚು ಮಂದಿ ನಮ್ಮ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮನೆಗಳಲ್ಲೇ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಉತ್ತರಾಖಂಡದ ಡೂನ್ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ. ನರೈನ್ಜಿತ್ ಸಿಂಗ್ ತಿಳಿಸಿದ್ದಾರೆ.
ಕೊರೊನಾ 1ನೇ ಅಲೆಯ ಸಂದರ್ಭ ವೈರಸ್ನಿಂದ ಚೇತರಿಸಿಕೊಂಡಿದ್ದವರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೆ ಅದು ಸಣ್ಣ ಪ್ರಮಾಣದಲ್ಲಿತ್ತು. ಸೌಮ್ಯ ಜ್ವರ, ಸುಸ್ತು-ಆಯಾಸದಂತಹ ಲಕ್ಷಣಗಳು ಕಂಡು ಬರುತ್ತಿತ್ತು. ಅದರಲ್ಲಿಯೂ 60 ವರ್ಷ ಮೇಲ್ಪಟ್ಟವರು ಅಥವಾ ಶ್ವಾಸಕೋಶ ಸಮಸ್ಯೆ ಇದ್ದವರಿಗೆ ಹೀಗೆ ಆಗುತ್ತಿತ್ತು. ಆದರೆ ಈ ಬಾರಿ ಉಂಟಾಗುತ್ತಿರುವ ಕೋವಿಡೇತರ ಸಮಸ್ಯೆಗಳು ತುಂಬಾ ಗಂಭೀರವಾಗಿವೆ.