ಲಖನೌ (ಉತ್ತರ ಪ್ರದೇಶ): ಯುವತಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ ನಂತರ ಆಕೆಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪ ಪ್ರಕರಣ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಮಾನವ ಕಳ್ಳಸಾಗಣೆ ಮತ್ತು ಮತಾಂತರದ ಆರೋಪದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಲಖನೌ ಪೊಲೀಸರು, ಆರೋಪಿಗಳಾದ ಅಮೀರ್, ಜಬೀರ್, ನಜೀರ್ ಮತ್ತು ವಹಾಬ್ ಎಂಬುವರನ್ನು ಬಂಧಿಸಿದ್ದಾರೆ. ಈ ನಾಲ್ವರ ಪೈಕಿ ನಜೀರ್ ಮತ್ತು ವಹಾಬ್ ಉನ್ನಾವೋ ನಿವಾಸಿಗಳಾಗಿದ್ದು, ಅಮೀರ್ ಹಾಗೂ ಈತನ ತಂದೆ ಜಬೀರ್ ಎಂಬುವರು ಲಖನೌದ ಠಾಕೂರ್ ಗಂಜ್ ನಿವಾಸಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಜೀಶಾನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್ ತಿಳಿಸಿದ್ದಾರೆ.
ಈ ಆರೋಪಿಗಳು ಗ್ರಾಮೀಣ ಭಾಗದ ಯುವತಿಯನ್ನು ಪ್ರೇಮದ ಜಾಲಕ್ಕೆ ಬೀಳಿಸಿ ಮೋಸ ಮಾಡುತ್ತಿದ್ದರು. ನಂತರದಲ್ಲಿ ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕೆಲವು ದಿನಗಳ ಕಾಲ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದರು. ನಂತರ ಆ ಯುವತಿಯವರನ್ನು ಬೇರೆ ಖರೀದಿದಾರರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ಬಯಲಾಗಿದ್ದು ಹೇಗೆ?: ಠಾಕೂರ್ ಗಂಜ್ ನಿವಾಸಿಯಾದ ಅಮೀರ್ ಎರಡು ವರ್ಷಗಳ ಹಿಂದೆ ಲಖನೌದ ರಹೀಮಾಬಾದ್‌ನಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆ, ಆರೋಪಿ ಅಮೀರ್ ತನ್ನ ಹೆಸರನ್ನು ಬದಲಿಸಿಕೊಂಡಿದ್ದ. ಈ ಮೂಲಕ ಯುವತಿಯನ್ನು ಪ್ರೇಮ ಪ್ರಕರಣದಲ್ಲಿ ಸಿಲುಕಿಸಿ ಅಕ್ರಮ ಸಂಬಂಧ ಬೆಳೆಸಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.
ನಂತರದಲ್ಲಿ ಧರ್ಮ ಬದಲಾಯಿಸುವಂತೆ ಯುವತಿಗೆ ಮೇಲೆ ಆರೋಪಿ ಕಡೆಯಿಂದ ಒತ್ತಡ ಹೇರಲಾಗಿತ್ತು. ಆದರೆ, ಯುವತಿ ಆತನ ಮಾತು ಕೇಳಿರಲಿಲ್ಲ. ಇದರಿಂದ ಸಂಚು ರೂಪಿಸಿ ಎರಡು ದಿನಗಳ ಹಿಂದೆ ಆಕೆಗೆ ಕರೆ ಮಾಡಿ ಭೇಟಿಯಾಗುವ ನೆಪದಲ್ಲಿ ಕರೆಸಿಕೊಂಡಿದ್ದ. ಈ ವೇಳೆ ಅಮೀರ್ ತನ್ನ ಸಹಚರರೊಂದಿಗೆ ಸೇರಿಕೊಂಡು ಆಕೆಯನ್ನು ಅಪಹರಿಸಿ ಮಾರಾಟ ಮಾಡಲೆಂದು ರೈಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಆದರೆ, ಈ ಸಂದರ್ಭದಲ್ಲಿ ಯುವತಿ ಅದು ಹೇಗೋ ಆರೋಪಿಯ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾಳೆ. ಈ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಹಲವು ತಂಡಗಳನ್ನು ರಚಿಸಿ ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ಥಳದ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡಗಳು ಹರೌನಿ ರೈಲು ನಿಲ್ದಾಣವನ್ನು ತಲುಪಿ ಅವಧ್ ಅಸ್ಸೋಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆಗ ಸುಮಾರು ಒಂದು ಗಂಟೆಯೊಳಗೆ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ನಂತರದಲ್ಲಿ ಸಂತ್ರಸ್ತೆ ನೀಡಿದ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಆಗ ಐದು ಗಂಟೆಯೊಳಗೆ ಪ್ರಮುಖ ಆರೋಪಿ ಅಮೀರ್ ಸೇರಿ ನಾಲ್ವರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರ ವಿಚಾರಣೆ ವೇಳೆ ಆರೋಪಿ ಅಮೀರ್, ತನ್ನ ತಂದೆಯೊಂದಿಗೆ ಸೇರಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ತಂಡವನ್ನು ನಡೆಸುತ್ತಿರುವುದಾಗಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲೇಡಿ ಸಿಂಗಂ ಜುನ್ಮೋನಿ ರಾಭಾ ಸಾವು ಪ್ರಕರಣ: ಸಿಐಡಿಯಿಂದ ಸಿಬಿಐಗೆ ತನಿಖೆ ವರ್ಗಾವಣೆ