ಲಖನೌ(ಉತ್ತರ ಪ್ರದೇಶ): 403 ವಿಧಾನಸಭೆ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದಲ್ಲಿಂದು ಕೊನೆಯ ಹಂತದಲ್ಲಿ 54 ಕ್ಷೇತ್ರಗಳಿಗೆ ವೋಟಿಂಗ್ ನಡೆದಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ. 54.18ರಷ್ಟು ಮತದಾನವಾಗಿದೆ. ಈ ಮೂಲಕ ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ಚುನಾವಣಾ ಯುದ್ಧಕ್ಕೆ ತೆರೆ ಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 54 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಇದರ ಜೊತೆಗೆ ಅಜಂಗಢ, ಗಾಜಿಪುರ, ಜಾನ್‌ಪುರ್, ಮಿರ್ಜಾಪುರ, ಗಾಜಿಪುರ, ಚಂದೌಲಿ ಮತ್ತು ಸೋನ್‌ಭದ್ರದಲ್ಲೂ ವೋಟಿಂಗ್ ನಡೆದಿದೆ. 12,205 ಕೇಂದ್ರಗಳ 23,535 ಬೂತ್ಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನವಾಗಿದೆ.
ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಿಗದಿಯಾಗಿತ್ತು. ಫೆ. 10,14,20,23, 27,ಮಾರ್ಚ್ 3 ಮತ್ತು 7ರಂದು ನಿಗದಿಯಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತವಾಗಿ ಮತದಾನವಾಗಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ವಿವಿಪ್ಯಾಟ್ನಲ್ಲಿ ಭದ್ರವಾಗಿದೆ.
ಇದನ್ನೂ ಓದಿ: ಪ್ರೀತಿಸಿ ವಿವಾಹವಾದ ತಮಿಳುನಾಡು ಸಚಿವರ ಪುತ್ರಿ: ರಕ್ಷಣೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ
ಈ ಹಿಂದೆ 2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 312ರಲ್ಲಿ ಗೆಲುವು ದಾಖಲು ಮಾಡಿ ಅಧಿಕಾರಕ್ಕೆ ಬಂದಿತ್ತು. ಉಳಿದಂತೆ ಎಸ್ಪಿ 47, ಬಿಎಸ್ಪಿ 19 ಹಾಗೂ ಕಾಂಗ್ರೆಸ್ ಕೇವಲ 7ಕಡೆ ಗೆಲುವಿನ ಖಾತೆ ತೆರದಿತ್ತು.
ಮಾರ್ಚ್ 10ರಂದು ಫಲಿತಾಂಶ: ಉತ್ತರ ಪ್ರದೇಶ ಜೊತೆಗೆ ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರದಲ್ಲೂ ಮತದಾನ ನಡೆದಿದ್ದು, ಎಲ್ಲ ರಾಜ್ಯದ ಫಲಿತಾಂಶ ಮಾರ್ಚ್ 10ರಂದು ಬಹಿರಂಗಗೊಳ್ಳಲಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಫಲಿತಾಂಶದತ್ತ ನೆಟ್ಟಿದೆ.