ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಮಂಗಳವಾರ 10 ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಿದೆ. ಸೀತಾಪುರದ ಪ್ರಿಯಾಂಶಿ ಸೋನಿ ಎನ್ನುವವರು ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಬರೇಲಿಯ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸೀತಾಪುರದ ನಿವಾಸಿ 50 ವರ್ಷದ ಪ್ರತಾಪ್ ಸಿಂಗ್ ಇಡೀ ರಾಜ್ಯದ ಜೈಲು ಪರೀಕ್ಷಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು 83.3 ಶೇ ಅಂಕ ಗಳಿಸಿದ್ದಾರೆ.
ಹಾಗೆಯೇ ಪಿಯುಸಿ ಪರೀಕ್ಷೆ ಫಲಿತಾಂಶವೂ ಪ್ರಕಟಗೊಂಡಿದ್ದು, ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವರದಕ್ಷಿಣೆ ಸಾವು ಪ್ರಕರಣದ ಮತ್ತೊಬ್ಬ ಕೈದಿ 35 ವರ್ಷದ ಛೋಟೆ ಲಾಲ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 61.1 ಪರ್ಸೆಂಟ್ ಅಂಕಗಳನ್ನು ಪಡೆದು ಜೈಲುಗಳ ಪರೀಕ್ಷಾರ್ಥಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಾಮಾನ್ಯ ಅಭ್ಯರ್ಥಿಗಳಂತೆಯೇ ಯುಪಿ ಬೊರ್ಡ್ನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಜೈಲಿನಲ್ಲಿದ್ದ ಕೈದಿಗಳು ಕೂಡ ಬರೆದಿದ್ದಾರೆ. ಜೈಲಿನಲ್ಲೇ ಸ್ಥಾಪಿಸಲಾದ ಪರೀಕ್ಷಾ ಕೇಂದ್ರಗಳಲ್ಲಿ 10ನೇ ಹಾಗೂ 12 ನೇ ತರಗತಿ ಪರೀಕ್ಷೆಗಳನ್ನು ಕೈದಿಗಳು ಎದುರಿಸಿದ್ದಾರೆ. ಮಂಗಳವಾರ ಯುಪಿ ಪರೀಕ್ಷಾ ಮಂಡಳಿ 10 ಮತ್ತು 12 ನೇ ತರಗತಿ ಪರೀಕ್ಷೆ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.
ಕೈದಿ ಪ್ರತಾಪ್ ಸಿಂಗ್ 600 ಕ್ಕೆ 503 ಅಂಕಗಳನ್ನು ಪಡೆದು ಉತ್ತರ ಪ್ರದೇಶದ ಕೈದಿ ಪರೀಕ್ಷಾರ್ಥಿಗಳಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಪ್ರತಾಪ್ ಸಿಂಗ್ ಇಡೀ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅಗ್ರಸ್ಥಾನ ಪಡೆದಿರುವ ಕೈದಿ ಪ್ರತಾಪ್ ಸಿಂಗ್ ಅವರನ್ನು ಅವರ ಸಹೋದರರು ಅಭಿನಂದಿಸಿದ್ದಾರೆ.
ಬರೇಲಿಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಛೋಟೆ ಲಾಲ್ ಪಿಯುಸಿ ಪರೀಕ್ಷೆ ಬರೆದಿದ್ದು, 500 ಅಂಕಗಳಿಗೆ 367 ಅಂಕಗಳನ್ನು ಗಳಿಸುವ ಮೂಲಕ ಉತ್ತರ ಪ್ರದೇಶದ ಜೈಲು ಪರೀಕ್ಷಾರ್ಥಿಗಳಲ್ಲಿ ಛೋಟೆ ಲಾಲ್ ಅಗ್ರಸ್ಥಾನ ಗಳಿಸಿದ್ದಾರೆ. ಛೋಟೆ ಲಾಲ್ 10 ವರ್ಷಗಳ ಶಿಕ್ಷೆಗಾಗಿ ಬರೇಲಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಕಷ್ಟಪಟ್ಟು ಓದಿ ಜಿಲ್ಲೆಗಳ ಪರೀಕ್ಷಾರ್ಥಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ರಾಂಪುರ ಜಿಲ್ಲಾ ಕಾರಾಗೃಹದ ಮಹಿಳಾ ಖೈದಿಗೆ ದ್ವಿತೀಯ ಸ್ಥಾನ: ಜಿಲ್ಲಾ ಕಾರಾಗೃಹದಲ್ಲಿ ಬಂಧಿತರಾಗಿರುವ ಮಹಿಳಾ ಕೈದಿ 40 ವರ್ಷದ ನಯೀಮಾ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 72.6 ಅಂಕ ಪಡೆದು ಮಹಿಳಾ ಕೈದಿಗಳ ಪೈಕಿ ಪ್ರಥಮ ಸ್ಥಾನ ಹಾಗೂ, ಜೈಲು ಕೈದಿಗಳ ಪೈಕಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 600 ಅಂಕಗಳಿಗೆ 436 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದ ಸಾಧನೆ ಮಾಡಿದ್ದಾರೆ. ಮಹಿಳೆಯಾಗಿದ್ದರೂ ಜೈಲಿನಲ್ಲಿ ಬಂಧಿಯಾಗಿರುವ ನಯಿಮಾ ಈ ಸಾಧನೆ ಮಾಡಿರುವುದು ವಿಶೇಷ. ಬರೇಲಿ ಸೆಂಟ್ರಲ್ ಜೈಲಿನಲ್ಲಿಯೇ ನಯಿಮಾ ಪರೀಕ್ಷಾ ಕೇಂದ್ರವಿತ್ತು. ಆದರೆ, ಅವರನ್ನು ರಾಂಪುರದ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು. ಶಿಕ್ಷಣದ ಮೇಲಿನ ಅವರ ಉತ್ಸಾಹ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಜಿಲ್ಲಾ ಕಾರಾಗೃಹ ರಾಂಪುರದಿಂದ ಬರೇಲಿಗೆ ಕರೆತರಲು ಜೈಲು ಪ್ರಧಾನ ಕಚೇರಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಯುಪಿ ಬೋರ್ಡ್ 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾದ ಬಹುತೇಕ ಎಲ್ಲಾ ಕೈದಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 10ನೇ ತರಗತಿ ಪರೀಕ್ಷೆಗೆ ಹಾಜರಾದ 62 ಕೈದಿಗಳಲ್ಲಿ 59 ಮಂದಿ ಯಶಸ್ವಿಯಾಗಿದ್ದು, ಶೇ.95.16ರಷ್ಟು ಜನ ಉತ್ತೀರ್ಣರಾಗಿದ್ದಾರೆ. ಅದೇ ರೀತಿ 65 ಕೈದಿಗಳಲ್ಲಿ 45 ಮಂದಿ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ನೈನಿ ಮತ್ತು ಬರೇಲಿಯ ಕೇಂದ್ರ ಕಾರಾಗೃಹಗಳು ಸೇರಿದಂತೆ ಉತ್ತರ ಪ್ರದೇಶದ 25 ಜೈಲುಗಳ ಕೈದಿಗಳು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು 10 ನೇ ತರಗತಿಯಲ್ಲಿ ಶೇಕಡಾ 95.16 ಮತ್ತು 12 ನೇ ತರಗತಿಯಲ್ಲಿ ಶೇಕಡಾ 69.23 ಒಟ್ಟಾರೆ ಶೇಕಡಾವಾರು ಫಲಿತಾಂಶವನ್ನು ದಾಖಲಿಸಿರುವುದು ವಿಶೇಷ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್!