ನವದೆಹಲಿ: ಮಾವೋವಾದಿಗಳ ಹುಟ್ಟಡಗಿಸಲು ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಮಾವೋವಾದಿಗಳು ನಡೆಸುತ್ತಿರುವ ಹಿಂಸಾತ್ಮಕ ಮತ್ತು ಕ್ರೂರ ದೌರ್ಜನ್ಯವನ್ನು ಖಂಡಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತೆ ಕೇಂದ್ರ ಗೃಹ ಸಚಿವಾಲಯವು ನಾಗರಿಕರಿಗೆ ಮನವಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಲಭ್ಯವಿರುವ ಯಾವುದೇ ವೇದಿಕೆಯಲ್ಲಿ ಸಿಪಿಐ (ಮಾವೋವಾದಿಗಳು) ಮತ್ತು ಎಲ್ಡ್ಲ್ಯೂಇ ಗುಂಪುಗಳು ಅಮಾಯಕ ನಾಗರಿಕರ ಮೇಲೆ ನಡೆಸುತ್ತಿರುವ ಹಿಂಸಾತ್ಮಕ ದೌರ್ಜನ್ಯವನ್ನು ಖಂಡಿಸಿ ಎಂದು ಗೃಹ ವ್ಯವಹಾರಗಳ ಸಚಿವಾಲಯ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
'ಪದೇ ಪದೇ ಕೇಳಲಾಗುವ ಪ್ರಶ್ನೆಗಳು' ಎಂಬ ವಿಭಾಗದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಗೃಹ ಸಚಿವಾಲಯ, ದೇಶ ನಿರ್ಮಾಣ ಪ್ರಕ್ರಿಯೆಗೆ ಮಾವೋವಾದಿಗಳ ಸಿದ್ಧಾಂತ ಅಪಾಯ ಉಂಟುಮಾಡುತ್ತಿದೆ. ಈ ಕುರಿತು ಜನತೆ ಎಚ್ಚೆತ್ತುಕೊಂಡು ಸಂವೇದನಾಶೀಲರಾಗಬೇಕು ಎಂದು ಒತ್ತಿಹೇಳಿದೆ.
ಮಾವೋವಾದಿ ದಂಗೆಕೋರರನ್ನು ದೀರ್ಘಕಾಲದವರೆಗೆ ಗಂಭೀರವಾದ ಆಂತರಿಕ ಭದ್ರತಾ ಸಮಸ್ಯೆಯಾಗಿ ನೋಡಿರಲಿಲ್ಲ, ಮಾವೋವಾದಿಗಳು ಅನೇಕ ಈಶಾನ್ಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದು, ಆಗಾಗ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ಗುಂಪುಗಳೊಂದಿಗೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಲ್ಲಿನ ಮಾವೋವಾದಿ ಉಗ್ರರು ಫಿಲಿಪೈನ್ಸ್, ಟರ್ಕಿ ಸೇರಿದಂತೆ ವಿದೇಶಿ ಮಾವೋವಾದಿಗಳ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಪಂಜಾಬ್ ಚುನಾವಣಾ ಕಣಕ್ಕೆ ಪ್ರಧಾನಿ ಮೋದಿ: ಪ್ರತಿಭಟನೆಗೆ ಸಜ್ಜಾದ ರೈತ ಸಂಘಟನೆಗಳು
ಈ ಕುರಿತು ಮಾತನಾಡಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್, ಮಾವೋವಾದಿಗಳ ಹಿಂಸಾಚಾರ ದೇಶದಲ್ಲಿ ಕಡಿಮೆಯಾಗಿದೆ. ಆದರೂ ಈ ನಿಟ್ಟಿನಲ್ಲಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳ ಬಳಕೆ ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ನೀಡುತ್ತದೆ. ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಇದು ಸಹಕಾರಿ ಎಂದು ಹೇಳಿದ್ದಾರೆ.