ಮಚಲಿಪಟ್ಟಣ (ಆಂಧ್ರ ಪ್ರದೇಶ): ಲೋನ್ ಆ್ಯಪ್ ಏಜೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ರಾಮಾಂಜನೇಯುಲು ನೇತೃತ್ವದ ವಿಶೇಷ ತನಿಖಾ ದಳ (ಎಸ್ಐಟಿ) ದೆಹಲಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದೆ. ಮಚಲಿ ಪಟ್ಟಣದ ಎಸ್ಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಸ್ಪಿ ಜೋಶುವಾ ಈ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳು ಒಬ್ಬರಿಗೊಬ್ಬರು ಪರಿಚಯ ಇಲ್ಲದಿರುವುದು ಆಶ್ಚರ್ಯದ ಸಂಗತಿ ಎಂದು ಅವರು ತಿಳಿಸಿದರು. ಆನ್ಲೈನ್ ಲೋನ್ ಮಂಜೂರು ಮಾಡಿದ ನಂತರ ಬರುವ ಇಎಂಐ ಮೊತ್ತದಲ್ಲಿ ಯಾರಿಗೆಷ್ಟು ಹಂಚಿಕೆಯಾಗಬೇಕು ಎಂಬುದನ್ನು ನಿರ್ಧರಿಸುವುದು ಇವರ ಕೆಲಸವಾಗಿತ್ತು ಎಂದು ಜೋಶುವಾ ಹೇಳಿದರು.
ಆರೋಪಿಗಳು ಭಾರತ ಸೇರಿದಂತೆ ಚೀನಾ ಹಾಗೂ ಪಾಕಿಸ್ತಾನದ ಸರ್ವರ್ಗಳನ್ನು ಬಳಕೆ ಮಾಡಿದ್ದು ಕಂಡು ಬಂದಿದೆ. ಆರೋಪಿಗಳ ಖಾತೆಗಳಲ್ಲಿದ್ದ 23 ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ಈ ಹಿಂದೆ ಇದೇ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇವರು ಸಾಲದ ಆ್ಯಪ್‌ಗಳ ಮೂಲಕ ಸಾಲ ನೀಡುತ್ತಿದ್ದರು. ಮಂಜೂರಾದ ಹಣವನ್ನು ತಿಂಗಳ ಕಂತುಗಳಲ್ಲಿ ವಸೂಲಿ ಮಾಡಿ ಸಾಲ ಚುಕ್ತಾ ಆದರೂ ಸಾಲ ಪಡೆದವರನ್ನು ಸತಾಯಿಸುತ್ತಿದ್ದರು. ಪೆನಮಲೂರು ಮತ್ತು ಅತ್ಕೂರು ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಯ ಭಾಗವಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಜೋಶುವಾ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ನೌಕರರಿಂದಲೇ ಹೆಚ್ಚುತ್ತಿರುವ ವಂಚನೆ: ಕೋಟಿ ಲಪಟಾಯಿಸಿದ ಅಧಿಕಾರಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್!