ಕಾನ್ಪುರ್, ಉತ್ತರಪ್ರದೇಶ: ಆಗಸ್ಟ್ 30ರಂದು ಉತ್ತರ ಪ್ರದೇಶ ಲೋಕಸೇವಾ ಆಯೋಗವು ಪಿಸಿಎಸ್ ಜೆ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಗಳಲ್ಲಿ ಒಟ್ಟು 303 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾನ್ಪುರದ ನಿಶಿ ಗುಪ್ತಾ ಮೊದಲ ಸ್ಥಾನ ಪಡೆದಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ನಿಶಿ ಗುಪ್ತಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಿಶಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ರೆ, ಪ್ರಯಾಗ್‌ರಾಜ್‌ನ ಶಿಶಿರ್ ಯಾದವ್ ಎರಡನೇ ಸ್ಥಾನ ಮತ್ತು ಕಸ್ಗಂಜ್‌ನ ರಶ್ಮಿ ಸಿಂಗ್ ಮೂರನೇ ಸ್ಥಾನ ವನ್ನು ಅಲಂಕರಿಸಿದ್ದಾರೆ.
ಪಿಸಿಎಸ್ ಜೆ ಫಲಿತಾಂಶವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ನಡೆಸುವ ಪರೀಕ್ಷೆಗಳಲ್ಲಿ ಇದು ಸಹ ಸೇರಿದೆ. ಪಿಸಿಎಸ್ ಜೆ ಮೊದಲ ಪತ್ರಿಕೆ ಫೆಬ್ರವರಿ 14 ರಂದು ನಡೆದಿತ್ತು. ಅಂತಿಮ ಫಲಿತಾಂಶವನ್ನು ಆರು ತಿಂಗಳೊಳಗೆ ಬಿಡುಗಡೆ ಮಾಡಲಾಗಿದೆ. ನಿನ್ನೆ 303 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ಅವರು ನ್ಯಾಯಾಂಗ ಸೇವೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ನನಗೆ ತುಂಬಾ ಗ್ರೇಟ್ ಅನಿಸುತ್ತಿದೆ. ಮೊದಲನೇ ರ‍್ಯಾಂಕ್ ಪಡೆಯುವುದು ಅನಿರೀಕ್ಷಿತವಾಗಿತ್ತು ಆದರೆ, ನಾನು ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇನೆ ಎಂದು ಹೆಚ್ಚು ಕಡಿಮೆ ಖಚಿತವಾಗಿತ್ತು. ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ನನ್ನ ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರಿಗೆ ನನ್ನ ಯಶಸ್ಸನ್ನು ಅರ್ಪಿಸಲು ನಾನು ಬಯಸುತ್ತೇನೆ ಅಂತಾ ಯುಪಿಪಿಎಸ್‌ಸಿ ಪಿಸಿಎಸ್ (ಜೆ) ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿರುವ ನಿಶಿ ಗುಪ್ತಾ ಅವರ ಮನಸ್ಸಿನ ಮಾತಾಗಿದೆ.
ಪ್ರಯಾಗ್‌ರಾಜ್‌ನ 2 ನೇ ರ‍್ಯಾಂಕ್ ಹೋಲ್ಡರ್ ಶಿಶಿರ್ ಯಾದವ್ ಮಾತನಾಡಿ, 10 ನೇ ತರಗತಿ ಪರೀಕ್ಷೆಯಲ್ಲಿ ನನ್ನ ಸ್ನೇಹಿತರಿಗೆ ಹೋಲಿಸಿದರೆ ನಾನು ಕಡಿಮೆ ಅಂಕ ಗಳಿಸಿದ್ದೇನೆ. ನನ್ನ ಪೋಷಕರ ಸಹಕಾರ, ಮಾರ್ಗದರ್ಶನ ನೀಡಿ ಪರೀಕ್ಷೆ ಬರೆಯಲು ಪ್ರೇರೇಪಿಸಿದರು ಮತ್ತು ನಾನು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೇನೆ. 2018 ರಲ್ಲಿ ನಾನು ಇದಕ್ಕಾಗಿ ನಿತ್ಯ ಅಭ್ಯಾಸ ಮಾಡಲು ತಯಾರಿ ಆರಂಭಿಸಿದೆ. ಇದರಿಂದಾಗಿ ಅಧ್ಯಯನದಲ್ಲಿ ನನಗೆ ಮತ್ತಷ್ಟು ಆಸಕ್ತಿ ಬೆಳೆಯಿತು ಎಂದು ಹೇಳಿದರು.
ಪಿಸಿಎಸ್ ಜೆಯಲ್ಲಿ ಎಂಟನೇ ರ‍್ಯಾಂಕ್ ಪಡೆದಿರುವ ಅಲಿಗಢದ ಸ್ವರ್ಣ ಜಯಂತಿ ನಿವಾಸಿ ರವೀನಾ ಕೂಡ ಮಾತನಾಡಿ, ನಾನು 5 ವರ್ಷಗಳ ನಂತರ ಯಶಸ್ಸನ್ನು ಸಾಧಿಸಿದ್ದೇನೆ. ನಾನು 2018 ರಲ್ಲಿ ಪದವಿ ಮುಗಿಸಿ ಐದು ವರ್ಷ ಕಳೆದಿದೆ. ಇದು ಬಹಳಷ್ಟು ಸಮಯ ತೆಗೆದುಕೊಂಡಿತು. ಈಗ ಆ ಸಮಯ ಬಂತು. ನಾನು ನನ್ನ ಹೆತ್ತವರಿಗೆ ಗೌರವವನ್ನು ತಂದು ಕೊಟ್ಟಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು 8 ನೇ ಸ್ಥಾನ ಗಳಿಸಿದ್ದೇನೆ. ಈಗ ಉತ್ತಮ ಕೆಲಸ ಮತ್ತು ಉತ್ತಮ ನ್ಯಾಯಾಂಗ ಅಧಿಕಾರಿಯಾಗುವುದು ನನ್ನ ಆದ್ಯತೆಯಾಗಿದೆ ಎಂದು ರವೀನಾ ಹೇಳಿದರು.
ಈ ಬಾರಿ ಪರೀಕ್ಷೆಯಲ್ಲಿ ಶೇ.55ರಷ್ಟು ಯುವತಿಯರು ಪಾಸ್ ಆಗಿದ್ದಾರೆ. 303 ಅಭ್ಯರ್ಥಿಗಳ ಪೈಕಿ 165 ಯುವತಿಯರು ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ನ್ಯಾಯಾಂಗ ಸೇವಾ ಸಿವಿಲ್ ಜಡ್ಜ್ (ಜೂನಿಯರ್ ವಿಭಾಗ) ಪರೀಕ್ಷೆ-2022 ರಲ್ಲಿ, ರಾಜ್ಯದ ಪ್ರತಿಯೊಂದು ಜಿಲ್ಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 60 ಜಿಲ್ಲೆಗಳಿಂದ ಕೆಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಯುಪಿ ನ್ಯಾಯಾಂಗ ಪರೀಕ್ಷೆ (ಸಿವಿಲ್ ಜಡ್ಜ್ ಜೂನಿಯರ್ ಡಿವಿಷನ್) ಉತ್ತರ ಪ್ರದೇಶ ನ್ಯಾಯಾಲಯದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ (ಯುಪಿಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ.
ಓದಿ: UPSC ತರಬೇತಿ ಪಡೆಯುವ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ: ಸಚಿವ ತಂಗಡಗಿ