ಶ್ರೀನಗರ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಓರ್ವ ರಸಾಯನಶಾಸ್ತ್ರಜ್ಞ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಪ್ರಕರಣ 1
ಮೊದಲ ದಾಳಿಯಲ್ಲಿ, ಪಂಡಿತ್ ಮಖಾನ್ ಲಾಲ್ ಬಿಂದ್ರೂ ಸಾವನ್ನಪ್ಪಿದ್ದಾರೆ. ಇವರು ರಸಾಯನಶಾಸ್ತ್ರಜ್ಞನಾಗಿದ್ದು, ಶ್ರೀನಗರದ ಇಕ್ಬಾಲ್ ಪಾರ್ಕ್ ಪ್ರದೇಶದಲ್ಲಿ ಬಿಂದ್ರೂ ಮೆಡಿಕೇಟ್ಸ್ ಎಂಬ ಕಚೇರಿ ಇಟ್ಟುಕೊಂಡಿದ್ದರು. ಮಂಗಳವಾರ ಸಂಜೆ 7.20ಕ್ಕೆ ಇವರ ಮೇಲೆ ಗುಂಡು ಹಾರಿಸಿರುವ ಉಗ್ರರು ಬಳಿಕ ಪರಾರಿಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾರ್ವಜನಿಕರು ಮುಂದಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಕರಣ 2
ಎರಡನೇ ದಾಳಿಯೂ ಶ್ರೀನಗರದಲ್ಲಿಯೇ ನಡೆದಿದ್ದು, ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಸಂಜೆ 8 ಗಂಟೆ ವೇಳೆಗೆ ಉಗ್ರರು ಓರ್ವ ಸ್ಥಳೀಯನಲ್ಲದ ಗೋಲ್ಗುಪ್ಪ (golguppas) ಕೊಂದು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವನನ್ನು ಬಿಹಾರ ಬಾಗಲ್ಪುರ ಜಿಲ್ಲೆಯ ವಿರೇಂದರ್ ಪಾಸ್ವನ್ ಎಂದು ಗುರುತಿಸಲಾಗಿದೆ.
ಪ್ರಕರಣ 3
ಮೂರನೇ ದಾಳಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ. ಶಹಗುಂದ್ ಪ್ರದೇಶದ ವ್ಯಕ್ತಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದು, ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರರ ದಾಳಿಗೆ ಖಂಡನೆ, ಸಂತಾಪ
ಪಂಡಿತ್ ಮಖಾನ್ ಲಾಲ್ ಬಿಂದ್ರೂ ಹತ್ಯೆಗೆ ಪ್ರತಿಕ್ರಿಯೆ ನೀಡಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ 'ಬಿಂದ್ರೂ ತುಂಬಾ ಒಳ್ಳೆಯ ವ್ಯಕ್ತಿ. ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ. ಇದು ಅತ್ಯಂತ ಹೇಯ ಕೃತ್ಯ. ಬಿಂದ್ರೂ ಅವರಿಗೆ ಸಂತಾಪ ಸೂಚಿಸುತ್ತೇನೆ' ಎಂದಿದ್ದಾರೆ.
ಮಾರಾಟಗಾರನ ಹತ್ಯೆಗೆ ಕೂಡಾ ಪ್ರತಿಕ್ರಿಯಿಸಿದ ಅವರು, ಇದೊಂದು ಉದ್ದೇಶಿತ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಮೆಹಬೂಬಾ ಮುಫ್ತಿ ಅವರೂ ಕೂಡಾ ಘಟನೆಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕಲ್ಲಿದ್ದಲು ಕೊರತೆ: 64 ಸ್ಥಾವರಗಳಲ್ಲಿ ನಾಲ್ಕೇ ದಿನದಲ್ಲಿ ಮುಗಿಯಲಿದೆ ದಾಸ್ತಾನು