ಹಾಪುರ್(ಉತ್ತರ ಪ್ರದೇಶ): ಸರ್ಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಬಯಲಿಗೆಳೆದು, ದುಷ್ಕರ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶ ಪಿಸಿಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗೆಡೆಯಾಗಿದ್ದಾರೆ. ಬರೋಬ್ಬರಿ 13ನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರಿದು ರಿಂಕು ಸಿಂಗ್?: ಹತ್ರಾಸ್ನಲ್ಲಿ ಜನಿಸಿದ ರಿಂಕು ಸಿಂಗ್, ತಮ್ಮ ಪ್ರಾಥಮಿಕ ಶಿಕ್ಷಣವನ್ನ ಅಲಿಗಢನಲ್ಲಿ ಪಡೆದುಕೊಂಡಿದ್ದರು. ನಂತರ ಉನ್ನತ ವ್ಯಾಸಂಗ ಜಮ್ಶೆಡ್‌ಪುರದಲ್ಲಿ ಮುಗಿಸಿದರು. 2004ರಲ್ಲಿ ಕೇವಲ 26 ವರ್ಷದವರಾಗಿದ್ದಾಗ ಪಿಸಿಎಸ್ ಪರೀಕ್ಷೆ(ಉತ್ತರ ಪ್ರದೇಶ ಪಬ್ಲಿಕ್ ಸರ್ವೀಸ್) ಪಾಸ್ ಮಾಡಿದ ಬಳಿಕ 2008ರಲ್ಲಿ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯಾಗಿ ನಿಯೋಜನೆಗೊಳ್ಳುತ್ತಾರೆ.
ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕಾಗಿ ಗುಂಡೇಟು: ಮುಜಾಫರ್ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಮತ್ತು ಪಿಂಚಣಿಯಲ್ಲಿ ಬರೋಬ್ಬರಿ 83 ಕೋಟಿ ರೂ. ಭ್ರಷ್ಟಾಚಾರ ಬಹಿರಂಗಪಡಿಸಿದ್ದರು. ಹೀಗಾಗಿ, ಮಾರ್ಚ್ 2009ರ 26ರಂದು ಬ್ಯಾಡ್ಮಿಂಟನ್ ಆಡ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ರಿಂಕು ಸಿಂಗ್ ದೇಹದಲ್ಲಿ ಒಟ್ಟು ಏಳು ಗುಂಡುಗಳು ತಗುಲಿದ್ದವು. ಒಂದು ಗುಂಡು ಮುಖದ ಭಾಗಕ್ಕೆ ತಾಗಿ, ದವಡೆಯಿಂದ ಹೊರಬಂದಿತ್ತು. ಹೀಗಾಗಿ, ಒಂದು ಕಣ್ಣು, ಕಿವಿ ಸಂಪೂರ್ಣವಾಗಿ ಹಾನಿಯಾಗಿದ್ದವು. ಮೀರತ್ನ ಹೈಯರ್ ಸೆಂಟರ್‌ನಲ್ಲಿ ದಾಖಲು ಮಾಡಿದ ಬಳಿಕ, ಬರೋಬ್ಬರಿ ಒಂದು ತಿಂಗಳ ಕಾಲ ಸುಭಾರ್ತಿ ವೈದ್ಯಕೀಯ ಕಾಲೇಜ್ ಮೀರತ್ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ
ಸಂಪೂರ್ಣವಾಗಿ ಗುಣಮುಖರಾಗಿ ಹೊರಬಂದ ಬಳಿಕ ಆರ್ಟಿಐ ಅಡಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ವರ್ಷವಾದರೂ ಅವರಿಗೆ ಮಾಹಿತಿ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ 2012ರಲ್ಲಿ ಅವರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಹೀಗಾಗಿ, ಅವರನ್ನ ಲಖನೌದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ರಿಂಕು ಸಿಂಗ್, ಲಖನೌ, ಅಲಿಗಢ, ಭದೋಹಿ, ಶ್ರಾವಸ್ತಿ, ಲಲಿತ್ಪುರ್ದಲ್ಲಿ ಸೇವೆ ಸಲ್ಲಿಸಿದ್ದು, 2019ರಲ್ಲಿ ಹಾಪುರ್ ಜಿಲ್ಲೆಯ ನಿಜಾಂಪುರ್ ಸರ್ಕಾರಿ ಐಎಎಸ್, ಪಿಸಿಎಸ್ ಕೋಚಿಂಗ್ ಸೆಂಟರ್‌ನಲ್ಲಿ ಕೇಂದ್ರ ಉಸ್ತುವಾರಿಯಾಗಿ ನೇಮಕವಾಗುತ್ತಾರೆ. ಅವರ ನೇಮಕದ ನಂತರ ಇಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಅಧಿಕ ಅಭ್ಯರ್ಥಿಗಳು ಯುಪಿಎಸ್ಸಿ ಹಾಗೂ ಪಿಸಿಎಸ್ ಪರೀಕ್ಷೆ ಪಾಸ್ ಆಗುತ್ತಾರೆ.
ತಮ್ಮ ಸರ್ಕಾರಿ ಸೇವೆ ನಡುವೆ ಕೂಡ ಬರೋಬ್ಬರಿ 13 ಸಲ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. 2021ರಲ್ಲಿ ಪಾಸ್ ಆಗಿರುವ ಇವರು 683ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.