ಲಖಿಂಪುರ ಖೇರಿ (ಉತ್ತರ ಪ್ರದೇಶ): ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೈತರ ಹತ್ಯೆ ಆರೋಪದಡಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಲಖಿಂಪುರ ಖೇರಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಫೆ.23 ರಂದು ಮತದಾನ ನಡೆಯಲಿದೆ.
ಭಾರತೀಯ ಜನತಾ ಪಕ್ಷದ ಯೋಗೇಶ್ ವರ್ಮಾ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ಮಧುರ್ ಅವರನ್ನು 37,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಕ್ಷೇತ್ರದಲ್ಲಿ ಗೆದ್ದಿದ್ದರು.
ಆಶ್ಚರ್ಯವೆಂದರೇ ಈ ಬಾರಿಯೂ ಬಿಜೆಪಿ ಮತ್ತು ಎಸ್ಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪುನರಾವರ್ತಿಸಿವೆ. ಸಂಸತ್ತಿನಲ್ಲಿ ಮತ್ತು ಹೊರಗೆ ಲಖಿಂಪುರ ಖೇರಿ ಹಿಂಸಾಚಾರದಿಂದ ಉಂಟಾದ ರಾಜಕೀಯ ಬಿಸಿಯಿಂದಾಗಿ ಈ ಕ್ಷೇತ್ರದತ್ತ ಇದೀಗ ಎಲ್ಲಾರ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಬುಂದೇಲ್‌ಖಂಡ್‌ನಲ್ಲಿ ಪಕ್ಷವು ಪಾಲ್, ಬ್ರಾಹ್ಮಣ ಮತ ಕಳೆದುಕೊಳ್ಳುತ್ತದೆ: ಅಸಮಾಧಾನಗೊಂಡ ಗುಲಾಬಿ ಗ್ಯಾಂಗ್‌ನ ಕಮಾಂಡರ್
2012ರಲ್ಲಿ ಎಸ್‌ಪಿಯ ಉತ್ಕರ್ಷ್ ವರ್ಮಾ ಮಧುರ್ ಅವರು ಬಹುಜನ ಸಮಾಜವಾದಿ ಪಕ್ಷದ ಜ್ಞಾನ್ ಪ್ರಕಾಶ್ ಬಾಜ್‌ಪೇಯ್ ಅವರನ್ನು ಸೋಲಿಸಿ ಕ್ಷೇತ್ರವನ್ನು ಗೆದ್ದಿದ್ದರು. ಕಾಂಗ್ರೆಸ್‌ನಿಂದ ರವಿಶಂಕರ್ ತ್ರಿವೇದಿ, ಬಿಎಸ್‌ಪಿಯಿಂದ ಮೋಹನ್ ಬಾಜಪೇಯಿ ಅವರನ್ನು ಕಣಕ್ಕಿಳಿಸಲಾಗಿದೆ. ಎಐಎಂಐಎಂನಿಂದ ಮೊಹಮ್ಮದ್ ಉಸ್ಮಾನ್ ಸಿದ್ದಿಕಿ, ಆಮ್ ಆದ್ಮಿ ಪಕ್ಷದಿಂದ (ಎಎಪಿ) ಖುಷಿ ಕಿನ್ನರ್ ಕಣದಲ್ಲಿದ್ದಾರೆ.
ಲಿಂಖಿಪುರ ಖೇರಿ ಲೋಕಸಭಾ ಕ್ಷೇತ್ರದಲ್ಲಿ ಎಂಟು ಅಸೆಂಬ್ಲಿ ಕ್ಷೇತ್ರಗಳಿದ್ದು, ಅವುಗಳೆಂದರೆ ಮೊಹಮ್ಮದಿ, ಗೋಲಾ ಗೋಕರನಾಥ್, ಕಾಸ್ತಾ, ಲಖಿಂಪುರ, ಶ್ರೀನಗರ, ನಿಘಸನ್, ಧೌರಾಹರಾ ಮತ್ತು ಪಾಲಿಯಾ ಕಲಾನ್. ಒಟ್ಟು 28,02,835 ಮತದಾರರಿದ್ದು, ಇದರಲ್ಲಿ 14,95,069 ಪುರುಷ ಮತದಾರರು ಮತ್ತು 13,07,623 ಮಹಿಳಾ ಮತದಾರರಿದ್ದಾರೆ. 2017ರಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.