ಲಕ್ನೋ (ಉತ್ತರ ಪ್ರದೇಶ): ಅಮ್ಮ ಅಂದರೆ ಭೂಮಿ ಮೇಲಿರುವ ಬೆಲೆ ಕಟ್ಟಲಾಗದ ಅಮೂಲ್ಯ ಜೀವ. ಆಕೆ ಪ್ರೀತಿ, ಕಾಳಜಿ, ತ್ಯಾಗದಿಂದ ತನ್ನ ಬದುಕನ್ನೇ ಮಕ್ಕಳಿಗೆ ಮೀಸಲಿಡುತ್ತಾಳೆ. ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ. ಇಲ್ಲಿ ತಾಯಿಯೊಬ್ಬರು ತನ್ನ ಮಗನಿಗೆ ಕಿಡ್ನಿ ದಾನ ಮಾಡಿ ಅಮ್ಮ ಎಂದರೇ ದೇವರು ಅನ್ನೋದನ್ನು ಮತ್ತೆ ಸಾಬೀತು ಮಾಡಿದರು.
ಗೀತಾ ಎಂಬ ಹೆಸರಿನ ಈ ಮಹಾನ್ ತಾಯಿಯು 21 ವರ್ಷದ ಮಗ ಸಚಿನ್ಗೆ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ಹರ್ದೋಯಿ ಪ್ರದೇಶದ ನಿವಾಸಿ ಸಚಿನ್ ಎರಡು ತಿಂಗಳ ಹಿಂದೆ ಆಯಾಸ, ಹೊಟ್ಟೆ ನೋವು, ಕೈಕಾಲುಗಳಲ್ಲಿ ಎಡಿಮಾ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇವರನ್ನು ಲಕ್ನೋದ ಕೆಜಿಎಂಯು (ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಸಾಣೆ ನಡೆಸಿದಾಗ ಎರಡೂ ಕಿಡ್ನಿಗಳು ಕುಗ್ಗಿದ್ದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಪತ್ತೆಯಾಗಿದೆ.
ಕಿಡ್ನಿ ಕಸಿ ಮಾಡುವುದರಿಂದ ಮಾತ್ರ ಆತನ ಜೀವ ಉಳಿಸಬಹುದು ಎಂದು ವೈದ್ಯರು ತಾಯಿಗೆ ಹೇಳಿದಾಗ, ತನ್ನ ಒಂದು ಕಿಡ್ನಿಯನ್ನು ಮಗನಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಅದೃಷ್ಟವಶಾತ್ ಮೂತ್ರಪಿಂಡಗಳು ಹೊಂದಿಕೆಯಾಗಿರುವುದನ್ನು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ.
ಶಸ್ತ್ರಚಿಕಿತ್ಸೆಯ ನಂತರ ಅಮ್ಮ, ಮಗ ಆರೋಗ್ಯವಾಗಿದ್ದಾರೆ. ಮೇಲ್ವಿಚಾರಣೆಗಾಗಿ ಐಸಿಯುನಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಮಗನ ಪ್ರಾಣ ಉಳಿಸಲು ಮಗನಿಗೆ ಕಿಡ್ನಿ ದಾನ ಮಾಡಿದ ತಾಯಿ; ಕಿಮ್ಸ್ ವೈದ್ಯರಿಂದ ಯಶಸ್ವಿ ಜೋಡಣೆ