ಲಕ್ನೋ: ಉತ್ತರ ಪ್ರದೇಶದ ಮದರಸಾಗಳು ಧಾರ್ಮಿಕ ಶಿಕ್ಷಣದ ಜೊತೆ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡಲು ನಿರ್ಧರಿಸಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಮದರಸಾ ಶಿಕ್ಷಣ ಮಂಡಳಿ ಅಧ್ಯಕ್ಷ ಇಫ್ತಿಕಾರ್ ಅಹಮದ್ ಜಾವೇದ್ ಮಾತನಾಡಿ, 'ಈ ವರ್ಷ ಮದರಸಾದ ಮಕ್ಕಳು ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್) ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಾರೆ. ಧಾರ್ಮಿಕ ಶಿಕ್ಷಣದ ಜತೆಗೆ ಆಧುನಿಕ ಶಿಕ್ಷಣವನ್ನೂ ನೀಡಲಾಗುವುದು. ಹೊಸ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಮದರಸಾಗಳು ಆಧುನಿಕ ಶಿಕ್ಷಣದತ್ತ ಹೆಚ್ಚು ಗಮನ ಹರಿಸಲಿವೆ' ಎಂದಿದ್ದಾರೆ.
ಇದನ್ನೂ ಓದಿ: ಮದರಸಾ ಶಿಕ್ಷಣ ಕುರಿತು ಸುಳ್ಳು ವರದಿ ಖಂಡಿಸಿದ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ
'ಈಗ ಮದರಸಾ ಮಕ್ಕಳು ಕಂಪ್ಯೂಟರ್, ಗಣಿತ, ವಿಜ್ಞಾನ ಕಲಿಯಬಹುದಾಗಿದೆ. ಮದರಸಾಗಳಿಗೆ ಹೊಸ ಪಠ್ಯಕ್ರಮವನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಎಲ್‌ಕೆಜಿ ಮತ್ತು ಯುಕೆಜಿಯಂತಹ ಪೂರ್ವ ಪ್ರಾಥಮಿಕ ತರಗತಿಗಳು ಮಾರ್ಚ್‌ನಿಂದ ಆರಂಭವಾಗಲಿವೆ' ಎಂದು ಅವರು ತಿಳಿಸಿದರು.
ಈ ಹಿಂದಿನಿಂದಲೂ ಮದರಸಾ ಶಿಕ್ಷಣ ಪದ್ಧತಿ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿವೆ. ಮಕ್ಕಳಿಗೆ ಕೇವಲ ಧಾರ್ಮಿಕ ಶಿಕ್ಷಣವನ್ನಷ್ಟೇ ನೀಡಲಾಗುತ್ತಿದೆ. ಹೀಗಿದ್ದರೆ ಮಕ್ಕಳ ಜ್ಞಾನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.