ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹೆರ್ಮೈನ್ ಪ್ರದೇಶದಲ್ಲಿ ಉತ್ತರಪ್ರದೇಶದ ಇಬ್ಬರು ಕಾರ್ಮಿಕರ ಮೇಲೆ ಗ್ರೆನೇಡ್ ಎಸೆದು ಹತ್ಯೆ ಮಾಡಲಾಗಿದೆ. ಘಟನೆ ಬಳಿಕ ಕಾರ್ಯಾಚರಣೆ ನಡೆಸಿದ ಸೇನಾಪಡೆ ಹೈಬ್ರಿಡ್ ಉಗ್ರನನ್ನು ಮಂಗಳವಾರ ಬಂಧಿಸಿದೆ.
ಬಂಧಿತ ಭಯೋತ್ಪಾದಕನನ್ನು ಹರ್ಮೆನ್ ಮೂಲದ ಇಮ್ರಾನ್ ಬಶೀರ್ ಗನಿ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಇಬ್ಬರು ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಗ್ಗಿನ ಜಾವ ನಿದ್ದೆಯಲ್ಲಿದ್ದಾಗ ಅವರ ಮೇಲೆ ಉಗ್ರ ಬಶೀರ್ ಗ್ರೆನೇಡ್ ಎಸೆದಿದ್ದಾನೆ.
ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಳಿಕ ಸೇನಾಪಡೆಯಿಂದ ಉಗ್ರನ ಬಂಧನಕ್ಕಾಗಿ ದಾಳಿ ನಡೆದಾಗ ಹೈಬ್ರಿಡ್ ಭಯೋತ್ಪಾದಕ ಬಶೀರ್ ಸೆರೆಸಿಕ್ಕಿದ್ದಾನೆ. ಈತ ನಿಷೇಧಿತ ಸಂಘಟನೆಯಾದ ಲಷ್ಕರ್ ಎ ತೊಯ್ಬಾ (ಎಲ್ಇಟಿ)ಗೆ ಸೇರಿದ ಹೈಬ್ರಿಡ್ ಭಯೋತ್ಪಾದಕ ಎಂದು ಗುರುತಿಸಲಾಗಿದೆ. ಬಂಧಿತ ಉಗ್ರನಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ನಾಗರಿಕರ ಹತ್ಯೆ ಖಂಡಿಸಿ ಪ್ರತಿಭಟನೆ: ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಕಾಶ್ಮೀರಿ ಪಂಡಿತ ಪುರನ್ ಕ್ರಿಶನ್ ಭಟ್ ಸೇರಿದಂತೆ ನಾಗರಿಕರ ಹತ್ಯೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಕುಲ್ಗಾಮ್ ಮತ್ತು ಬುದ್ಗಾಮ್‌ನಂತಹ ಜಿಲ್ಲೆಗಳಲ್ಲಿ ಸ್ಥಳೀಯರು ಫಲಕಗಳು ಮತ್ತು ಮೇಣದಬತ್ತಿಗಳೊಂದಿಗೆ ಬೀದಿಗಿಳಿದು ಘೋಷಣೆ ಕೂಗಿದರು.
ಓದಿ: ಜನ್ಮದಿನದ ಸಂಭ್ರಮದಲ್ಲಿ ವಿಹಾರಕ್ಕೆ ತೆರಳಿದ್ದ ಐವರು ಮಕ್ಕಳು.. ನದಿಯಲ್ಲಿ ಮುಳುಗಿ ಸಾವು