ಲಖನೌ(ಉತ್ತರ ಪ್ರದೇಶ): ಆತ ಚಿರ ಯುವಕನಾಗಿದ್ದಾಗಲೇ ಪ್ರೀತಿಯ ಬಲೆಗೆ ಬಿದ್ದಿದ್ದ. ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲವನ್ನೂ ಹೊಂದಿದ್ದ. ಮೈಲಿಗಟ್ಟಲೆ ದೂರ ಓಡಿ, ಹಗಲಿರುಳು ದುಡಿದು ಪೊಲೀಸ್ ಇಲಾಖೆ ಸೇರಲು ಬಯಸಿದ್ದ. ಆದ್ರೆ ಆತನಿಗೆ ಕೈ ಬೀಸಿ ಕರೆದಿದ್ದು ಮಾತ್ರ ಮಾಫಿಯಾ ಲೋಕ... ಅಪರಾಧ ಲೋಕದಲ್ಲಿ ಬಿದ್ದ ಆತನ ಜೀವನ ಕತ್ತಲಾಯ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ರಾಜ್ಯದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಅಪರಾಧಿಯಾಗಿದ್ದ. ಆತನೇ ಯುಪಿ ಮಾಫಿಯಾ ದುನಿಯಾದ ರಾಜ ಪಂಕಜ್ ಅಲಿಯಾಸ್ ಭೋಲಾ ಜಾಟ್..
ಯಾರಿವನು?: ಅಲಿಗಢ್ ಜಿಲ್ಲೆಯ ಧಂತೌಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಪಂಕಜ್ ಬಾಲ್ಯದಿಂದಲೂ ಪೊಲೀಸ್ ಆಗುವ ಕನಸು ಕಂಡಿದ್ದ. ಪೊಲೀಸರಿಗೆ ಸೇರುವ ಮೂಲಕ ಅಪರಾಧಿಗಳನ್ನು ತೊಡೆದುಹಾಕಲು ಆತ ಬಯಸಿದ್ದ. ಆತನ ಉತ್ಸಾಹ ಹೇಗಿತ್ತೆಂದರೆ ಬೆಳಗ್ಗೆ ಬೇಗ ಎದ್ದು ಮೈಲಿಗಟ್ಟಲೆ ದೂರ ಓಡುವುದು, ಗಂಟೆಗಟ್ಟಲೇ ವ್ಯಾಯಾಮ ಮಾಡುವುದೇ ಒಂದು ಕಾಯಕವಾಗಿತ್ತು. ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹಗಲಿರುಳು ಬೆವರು ಸುರಿಸಿದ ಪಂಕಜ್‌ಗೆ ಜೀವನದಲ್ಲಿ ಒಂದು ತಿರುವು ಸಿಕ್ಕಿತು. ಆ ತಿರುವೇ ಪಂಕಜ್‌ನ ಮುಂದಿನ ಜೀವನದ ಹಾದಿಯನ್ನೇ ಬದಲಾಯಿಸಿತು.
ಹಳ್ಳಿಯ ಹುಡುಗಿಗೆ ಮನ ಸೋತಿದ್ದ ಪಂಕಜ್: ಉಕ್ಕಿನ ದೇಹದ ಒಡೆಯ ಈ ಯುವಕನ ಹೃದಯ ಹಗಲಿರುಳು ಎನ್ನದೇ ನೆಮ್ಮದಿ ಹಾರಿಹೋಗುವ ರೀತಿಯಲ್ಲಿ ಗ್ರಾಮದ ಆರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಪ್ರೀತಿ ಮಾಯೆ ಹುಷಾರು ಅಂತಾರಲ್ಲ.. ಅದೇ ರೀತಿ ಪಂಕಜ್ ವಿಷಯದಲ್ಲೂ ಅದು ನಿಜ ಎನಿಸಿದೆ. ಆರತಿಯನ್ನು ಪಂಕಜ್ ತಮ್ಮ ಪ್ರಪಂಚವಾಗಿ ಸ್ವೀಕರಿಸಿದ್ದರು. ಆರತಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಅವನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪ್ರತಿದಿನ ಮನೆಯಿಂದ ಹೊರಗೆ ಬಂದು ಆಕೆಗೆ ಕಾಯುತ್ತಿದ್ದ. ಆದ್ರೆ ಆಕೆ ಎದುರಿಗೆ ಬಂದೊಡನೆ ತನ್ನ ಪ್ರೀತಿ ವ್ಯಕ್ತಪಡಿಸಲು ಪಂಕಜ್‌ಗೆ ಧೈರ್ಯ ಸಾಲುತ್ತಿರಲಿಲ್ಲ.
ಪಂಕಜ್ ಮುಂದೆ ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿತ್ತು. ಆರತಿಯ ಮುಂದೆ ತನ್ನ ಪ್ರೀತಿಯನ್ನು ಹೇಗೆ ಹೇಳಬೇಕು ಎಂದು ಚಿಂತೆಯಲ್ಲಿ ತೊಡಗಿದ್ದ ಪಂಕಜ್‌ಗೆ ಸತ್ಯ ಸಂಗತಿಯೊಂದು ತಿಳಿಯಿತು. ತಾನು ಗಾಢವಾಗಿ ಪ್ರೀತಿಸುತ್ತಿರುವ ಆರತಿ ಬೇರೆಯವರಿಗೆ ಮನಸೋತಿದ್ದಾಳೆ ಎಂಬ ಸತ್ಯ ಅರಿತ ಪಂಕಜ್‌ಗೆ ಸಿಡಿಲು ಬಡಿದಂತಾಗಿದೆ. ಪ್ರೀತಿಯ ಬಲೆಗೆ ಬಿದ್ದ ಆತ ಮುಂದಿನ ದಿನಗಳಲ್ಲಿ ದಾರಿ ತಪ್ಪಿದ ಮಗನಾದ. ಖಾಕಿ ಸಮವಸ್ತ್ರ ಧರಿಸುವ ಅವನ ಕನಸು ನುಚ್ಚು ನೂರಾಯ್ತು. ಪಂಕಜ್‌ಗೆ ಪ್ರೀತಿಯಾಗಲೀ.. ಪೊಲೀಸ್ ಕೆಲಸವಾಗಲೀ.. ಕೊನೆಗೆ ಎರಡೂ ಸಿಗಲೇ ಇಲ್ಲ.
ಓದಿ : ದುರ್ಯೋಧನನಂತೆ ಸರೋವರದಲ್ಲಿ ಅವಿತುಕೊಂಡ ರೌಡಿ.. ಭೀಮನಂತೆ ಹೊರ ಕರೆತಂದ ‘ಡ್ರೋನ್’
ಶ್ರೀಮಂತನಾಗುವ ಗೀಳು: ಪ್ರೀತಿ ಸಿಗಲಿಲ್ಲ ಎಂಬ ಆಘಾತ ಅವನ ಹೃದಯದಲ್ಲಿ ಹಣ ಸಂಪಾದಿಸುವ ಆಸೆಯನ್ನು ಮೂಡಿಸಿತು. ಪಂಕಜ್‌ನ ತಲೆಯಲ್ಲಿ ಶ್ರೀಮಂತನಾಗಿ ಬೆಳೆಯುವ ಮಹದಾಸೆ ಮೂಡಿತು. ಆದರೆ ನೇರ ಮಾರ್ಗದಿಂದ ಹಣ ಗಳಿಸಲು ಯುಗ-ಯುಗಗಳೇ ಬೇಕು. ಪಂಕಜ್‌ನ ಈ ದೌರ್ಬಲ್ಯದ ಲಾಭವನ್ನು ಹಳ್ಳಿಯ ವಂಚಕ ಬಾಬು ಬಳಸಿಕೊಂಡನು.
ಭೋಲಾ ಜಾಟ್ ಆಗಿ ಬದಲಾದ ಪಂಕಜ್: ಈ ಕೆಟ್ಟ ವಂಚಕ ಬಾಬು ಪಂಕಜ್‌ನನ್ನು ಅಪರಾಧ ಜಗತ್ತಿನಲ್ಲಿ ಪ್ರವೇಶಿಸುವಂತೆ ಮಾಡಿದನು. ಬಾಬುವಿನ ಆಜ್ಞೆಯ ಮೇರೆಗೆ ಮಥುರಾದ ವ್ಯಾಪಾರಿಯನ್ನು ಮೊದಲ ಬಾರಿಗೆ ದರೋಡೆ ಮಾಡುವ ಮೂಲಕ ಪಂಕಜ್ ಸಂಚಲನ ಸೃಷ್ಟಿಸಿದ. ಪಂಕಜ್ ಈಗ ಭೋಲಾ ಜಾಟ್ ಆಗಿ ಬದಲಾದನು. ಪಂಕಜ್ ಅಕಾ ಭೋಲಾ ಜಾಟ್ ಈ ಅಪರಾಧದ ಜಗತ್ತಿನಲ್ಲಿ ಓಡಲು ಪ್ರಾರಂಭಿಸಿದ್ದ. ಈ ಸಮಯದಲ್ಲಿ ಅವರು ಅಲಿಘಡನ ಕುಖ್ಯಾತ ಕ್ರಿಮಿನಲ್ ಸೋನು ಗೌತಮ್ನನ್ನು ಭೇಟಿಯಾದನು. ಸೋನು ಗೌತಮ್‌ಗೂ ಭೋಲಾ ಜಾಟ್‌ನಂತಹ ತೇಜಸ್ವಿ ಯುವಕ ಬೇಕಾಗಿತ್ತು. ಪ್ರೀತಿ ಮತ್ತು ಉದ್ಯೋಗದ ಹಾದಿ ಬಾಗಿಲು ಮುಚ್ಚಿದ ಬಳಿಕ ಭೋಲಾ ಈಗ ಮಾಫಿಯಾ ಜಗತ್ತಿನಲ್ಲಿ ಹೆಸರು ಗಳಿಸಲು ಬಯಸಿದ್ದ.
ಕ್ರೈಂ ಜಗತ್ತಿನಲ್ಲಿ ಹೆಸರು ಮಾಡಿದ ಭೋಲಾ: ಸೋನು ಗೌತಮ್ನ ಬಲಗೈ ಬಂಟ ಆಗುವ ಮೂಲಕ ಭೋಲಾ ಒಂದರ ಹಿಂದೆ ಒಂದರಂತೆ ಅಪರಾಧಗಳನ್ನು ಮಾಡುಲತ್ತಲೇ ಸಾಗಿದನು. ದರೋಡೆ, ಕೊಲೆ, ಅಪಹರಣದಂತಹ ಗಂಭೀರ ಅಪರಾಧಗಳು ಅವನಿಗೆ ಸುಖ ನೀಡಲಾರಂಭಿಸಿದವು. ಈ ಮಧ್ಯೆ, ಮಧ್ಯಪ್ರದೇಶದ ಗ್ವಾಲಿಯರ್‌ನ ಆಸ್ತಿ ಡೀಲರ್ ಬಿಲ್ಲು ಭದೌರಿಯಾನನ್ನು ಕೊಲ್ಲುವ ಗುತ್ತಿಗೆಯನ್ನು ಭೋಲಾ ಜಾಟ್ ಪಡೆದಿದ್ದನು. ಭೋಲಾ ಹಗಲಿನಲ್ಲೇ ವ್ಯಾಪಾರಿಯ ಮನೆಗೆ ನುಗ್ಗಿ ಅವನನ್ನು ಕೊಲೆ ಮಾಡಿದ್ದನು. ಈ ಹತ್ಯಾಕಾಂಡದ ನಂತರ ಭೋಲಾ ಜಾಟ್ಗೆ ಅಪರಾಧ ಜಗತ್ತಿನಲ್ಲಿ ದೊಡ್ಡ ಹೆಸರು ದೊರೆಯಿತು.
ಅಪರಾಧಿಗಳಿಂದ ಬೆಂಬಲ: ಪಶ್ಚಿಮ ಉತ್ತರ ಪ್ರದೇಶದ ಪ್ರತಿ ಜಿಲ್ಲೆಯ ಪೊಲೀಸರು ಭೋಲಾಗಾಗಿ ಹುಡುಕುತ್ತಿದ್ದರು. 2009 ರಲ್ಲಿ ಮೊದಲ ಬಾರಿಗೆ ಭೋಲಾ ಕ್ವಾರ್ಸಿಯ ಜನಕ್‌ಪುರಿಯಲ್ಲಿ ಕೋಚಿಂಗ್ ಆಪರೇಟರ್ ಅನ್ನು ಕೊಲೆ ಮಾಡಿದ್ದಕ್ಕೆ ಆತನನ್ನು ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಆದ್ರೂ ಸಿಕ್ಕಿರಲಿಲ್ಲ. 2011 ರಲ್ಲಿ, ಭೋಲಾ ಸಾವನ್ನು ಸಮೀಪದಿಂದ ಎದುರಿಸಿದರು.
ಸಾವಿನ ಭಯ: ಪಿಸಾವಾದಲ್ಲಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಭೋಲಾ ಮೇಲೆ ಗ್ರಾಮದ ಜನರು ಗುಂಡು ಹಾರಿಸಿದ್ದರು. ಈ ವೇಳೆ ಭೋಲಾನ ಮೂವರು ಸಹಚರರು ಸಾವನ್ನಪ್ಪಿದ್ದರು. ಆದರೆ ಭೋಲಾ ಮಾತ್ರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ. ಆಗ ಭೋಲಾಗೆ ಮೊದಲನೇ ಸಾವಿನ ಭಯ ಎದುರಾಗಿತ್ತು. ಅಪರಾಧದ ಜಗತ್ತಿನಲ್ಲಿ ಹಗಲಿರುಳು ಮುನ್ನಡೆಯುತ್ತಿದ್ದ ಭೋಲಾ, ಎನ್‌ಎಸ್‌ಜಿಯಿಂದ ಓಡಿಹೋದ ಭೀಕರ ಕ್ರಿಮಿನಲ್ ಹರೇಂದ್ರ ರಾಣಾ, ಸೋನು ಗೌತಮ್ ಮತ್ತು ಅರುಣ್ ಫೌಜಿಯಂತಹ ಕುಖ್ಯಾತ ಕ್ರಿಮಿನಲ್‌ಗಳೊಂದಿಗೆ ಬೆರೆತಿದ್ದ.
ಅನ್ಯ ರಾಜ್ಯಗಳ ಪೊಲೀಸರ ಕಣ್ಗಾವಲು: ಭೋಲಾ ಜಾಟ್ ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. 1 ಅಕ್ಟೋಬರ್ 2012 ರಂದು, ಮಥುರಾದ ಫರಾಹ್ ಬಳಿ ಶ್ರೀಧಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಭೋಲಾ ಜಾಟ್ ತನ್ನ ಸಹಚರರೊಂದಿಗೆ ಆಗ್ರಾ ರಿಸರ್ವ್ ಪೊಲೀಸ್ ಲೈನ್‌ನ ಕಾನ್‌ಸ್ಟೇಬಲ್ ಫೈಜ್ ಮೊಹಮ್ಮದ್ ಮತ್ತು ಆರೋಪಿ ಮೋಹಿತ್ ಭಾರದ್ವಾಜ್ನನ್ನು ಭಯಂಕರವಾಗಿ ಗುಂಡು ಹಾರಿಸಿ ಕೊಂದಿದ್ದ.
ಓದಿ: ಹಫ್ತಾ ನೀಡದ ಉದ್ಯಮಿಯ ಹತ್ಯೆಗೈದ ರೌಡಿ ಬನ್ನಂಜೆ ಗ್ಯಾಂಗ್: 9 ವರ್ಷಗಳ ಬಳಿಕ ಬಂತು ತೀರ್ಪು
ಗ್ಯಾಂಗ್ ದುರ್ಬಲ: ಈ ಘಟನೆಯಿಂದಾಗಿ ಭೋಲಾನನ್ನು ಭೀಕರ ಅಪರಾಧಿಗಳಾದ ಹರೇಂದ್ರ ರಾಣಾ, ಸೋನು ಗೌತಮ್ ಮತ್ತು ಅರುಣ್ ಫೌಜಿಯ ಸಾಲಿನಲ್ಲಿ ಸೇರಿಸಿತು. 22 ಫೆಬ್ರವರಿ 2013 ರಂದು STF ಹರೇಂದ್ರ ರಾಣಾ ಮತ್ತು ಅವನ ಪಾಲುದಾರ ವಿನೇಶ್ರನ್ನು ಬಂಧಿಸಿತು. ಹರೇಂದ್ರ ರಾಣಾ ಬಂಧನದಿಂದಾಗಿ ಇವರ ಗ್ಯಾಂಗ್ ದುರ್ಬಲಗೊಳ್ಳಲು ಪ್ರಾರಂಭಿಸಿತು. ಮತ್ತೊಂದೆಡೆ, ಭೋಲಾ ಜಾಟ್ ಹರೇಂದ್ರ ರಾಣಾನನ್ನು ಪೋಲೀಸರ ಬಂಧನದಿಂದ ಮುಕ್ತಗೊಳಿಸಲು ಯೋಜನೆಗಳನ್ನು ರೂಪಿಸುತ್ತಿದ್ದ. 5 ಡಿಸೆಂಬರ್ 2013 ರಂದು ಆಗ್ರಾ ಪೊಲೀಸ್ ಲೈನ್‌ನ ಕಾನ್‌ಸ್ಟೇಬಲ್‌ಗಳು ಆಂಧ್ರ ಎಕ್ಸ್‌ಪ್ರೆಸ್‌ನಿಂದ ಆಗ್ರಾಕ್ಕೆ ಹರೇಂದ್ರ ರಾಣಾನನ್ನು ದೆಹಲಿಯಲ್ಲಿ ಹಾಜರುಪಡಿಸಲು ಹಿಂದಿರುಗುತ್ತಿದ್ದರು. ಈ ವೇಳೆ ಫರಾಹ್ ಬಳಿ ಭೋಲಾ ಜಾಟ್ ಮತ್ತು ಅವನ ಆರು ಮಂದಿ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ಹರೇಂದ್ರ ರಾಣಾ ಮತ್ತು ವಿನೇಶ್ರನ್ನು ಕರೆದುಕೊಂಡು ಬಂದಿದ್ದರು.
ಬಂಧಿತ ಅಪರಾಧಿಗಳನ್ನು ಬಿಡಿಸುವಲ್ಲಿ ನಿಪುಣ: ಒಂದು ವರ್ಷದ ಹಿಂದೆ ಭೋಲಾ ಜಾಟ್ ಮೋಹಿತ್ ಭಾರದ್ವಾಜ್ ಜೊತೆ ಕಾನ್‌ಸ್ಟೇಬಲ್ ಫೈಜ್ ಮೊಹಮ್ಮದ್ನನ್ನು ಕೊಂದಿದ್ದನು. ಅಷ್ಟೇ ಅಲ್ಲ ಪೊಲೀಸರ ರೈಫಲ್ ಅನ್ನು ಕೂಡ ಭೋಲಾ ಲೂಟಿ ಮಾಡಿದ್ದನು. ಭೋಲಾ ಜಾಟ್‌ನ ಕೊಲೆ, ದರೋಡೆ ಮತ್ತು ಅಪಹರಣದ ಹೊರತಾಗಿ, ಅಪರಾಧಿಗಳನ್ನು ಪೊಲೀಸರ ಕಸ್ಟಡಿಯಿಂದ ಹೊರ ತರುವಲ್ಲಿಯೂ ನಿಪುಣನಾಗಿದ್ದ. ಪೊಲೀಸ್ ಕಸ್ಟಡಿಯಲ್ಲಿದ್ದ ಮೋಹಿತ್ ಭಾರದ್ವಾಜ್ನನ್ನು ಕೊಂದು ಹರೇಂದ್ರ ರಾಣಾನನ್ನು ಬಿಡಿಸಿದ ನಂತರ ಭೋಲಾ ಜಾಟ್ ಮತ್ತೊಂದು ಪ್ಲಾನ್ ಮಾಡಿದ. ಈ ಬಾರಿ ಅರುಣ್ ಫೌಜಿಯನ್ನು ಬಿಡುಗಡೆ ಮಾಡುವುದು ಅವನ ಯೋಜನೆಯಾಗಿತ್ತು.
ಬಾಲ್ಯ ಸ್ನೇಹಿತನ ಹತ್ಯೆ: 2013ರ ಜನವರಿ 27ರಂದು ಪೊಲೀಸ್ ಸಿಬ್ಬಂದಿ ಅರುಣ್ ಫೌಜಿಯನ್ನು ಮಥುರಾದಿಂದ ರಾಜಸ್ಥಾನದ ಬಿಜ್ ಕೋರ್ಟ್‌ಗೆ ರೋಡ್‌ವೇಸ್ ಬಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಫರೂಕಾಬಾದ್‌ನ ಅಸ್ಗರ್‌ಪುರ ಬಳಿ ಭೋಲಾ ಜಾಟ್ ಬಸ್‌ಗೆ ನುಗ್ಗಿ ಪೊಲೀಸರ ಮೇಲೆ ಮನಬಂದಂತೆ ಗುಂಡು ಹಾರಿಸಿ ಅರುಣ್ ಫೌಜಿಯನ್ನು ಎಸ್ಕೇಪ್ ಮಾಡಿಸಿದ್ದ. ಇದು ಹರೇಂದ್ರ ರಾಣಾ ಮತ್ತು ಸೋನು ಗೌತಮ್ ಕಣ್ಣುಗಳನ್ನು ಕೆಂಪಾಗಿಸಿದ್ದವು. ಭೋಲಾವನ್ನು ದುರ್ಬಲಗೊಳಿಸಲು ಮತ್ತು ನಿಯಂತ್ರಿಸಲು ಇವರಿಬ್ಬರು ಭೋಲಾನ ಬಾಲ್ಯದ ಗೆಳೆಯ ಮತ್ತು ಪ್ರತಿ ಅಪರಾಧದಲ್ಲಿ ಅವನಿಗೆ ಸಾಥ್ ನೀಡುತ್ತಿದ್ದ ಸಹಚರನನ್ನು ಕೊಲ್ಲುತ್ತಾ ಬಂದರು.
ಇದು ಭೋಲಾಗೆ ದೊಡ್ಡ ಹೊಡೆತವಾಗಿತ್ತು. ಈ ಪಿತೂರಿ ಬಗ್ಗೆ ತಿಳಿದ ಭೋಲಾ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದನು. ಭೋಲಾ ಜಾಟ್ ತನ್ನ ಬಾಲ್ಯ ಸ್ನೇಹಿತನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಮುನ್ನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದನು. ಭೋಲಾನನ್ನು 11 ಏಪ್ರಿಲ್ 2015 ರಂದು ಮೈನ್‌ಪುರಿ ಜೈಲಿಗೆ ಕಳುಹಿಸಲಾಯಿತು. ಅಲ್ಲಿಯೂ ಸಹಿತ ಭೋಲಾ ಶಾಂತನಾಗಿರಲಿಲ್ಲ. ಮೈನ್‌ಪುರಿ ಜೈಲಿನಲ್ಲಿ ಭೋಲಾ ಉನಾ ಗ್ಯಾಂಗ್ ನಡೆಸಲು ಪ್ರಾರಂಭಿಸಿದ. ಇದಾದ ನಂತರ ಭೋಲಾನನ್ನು ಫಿರೋಜಾಬಾದ್ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿದ್ದಾಗಲೂ ಸ್ನೇಹಿತನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಬೆಂಕಿ ಮಾತ್ರ ಶಾಂತವಾಗಿರಲಿಲ್ಲ. ಎದೆಯಲ್ಲಿ ಉರಿಯುತ್ತಲೇ ಇತ್ತು. ಜೈಲಿನ ಗೋಡೆಗಳು ಭೋಲಾನನ್ನು ದೀರ್ಘಕಾಲ ತಡೆಯಲು ಸಾಧ್ಯವಾಗಲಿಲ್ಲ.
ಓದಿ: ದರೋಡೆಗೆ ಸಂಚು: ರೌಡಿ ಶೀಟರ್ ಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ಪೊಲೀಸ್ ಕಸ್ಟಡಿಯಿಂದ ಭೋಲಾ ಪಾರು: ಮೇ 27, 2015 ಮಥುರಾದಲ್ಲಿ ಹಾಜರುಪಡಿಸಿದ ನಂತರ ಪೊಲೀಸರು ಭೋಲಾನನ್ನು ಫಿರೋಜಾಬಾದ್‌ಗೆ ಮರಳಿ ಕರೆದೊಯ್ಯುತ್ತಿದ್ದರು. ಈ ವೇಳೆ ಅವನ 12 ಸಹಚರರು ಬಸ್ ಮೇಲೆ ದಾಳಿ ಮಾಡಿ ಭೋಲಾನನ್ನು ಎಸ್ಕೇಪ್ ಮಾಡಿದ್ದರು. ಈ ದಾಳಿಯಲ್ಲಿ 4 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಭೋಲಾ ಪರಾರಿಯಾಗಿರುವುದು ಯುಪಿ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಘಟನೆ ನಡೆದ ಕೂಡಲೇ ಯುಪಿ ಡಿಜಿಪಿ ಎಕೆ ಜೈನ್ ಭೋಲಾ ಜಾಟ್‌ನ ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ ಘೋಷಿಸಿದ್ದರು.
ಎನ್‌ಕೌಂಟರ್‌ನಲ್ಲಿ ಸಾವು: ಪರಾರಿಯಾಗಿ ಮೂರು ತಿಂಗಳ ನಂತರ ಭೋಲಾ ಜಾಟ್‌ನ ಅಧ್ಯಾಯವನ್ನು ಯುಪಿ ಪೊಲೀಸರು ಶಾಶ್ವತವಾಗಿ ಮುಚ್ಚಿ ಹಾಕಿದರು. 9 ಆಗಸ್ಟ್ 2015 ರಂದು, ಭೋಲಾ ಬನ್ನಾದೇವಿ ಪ್ರದೇಶದಲ್ಲಿ ಸ್ನೇಹಿತನೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಅಲಿಗಢ ಪೊಲೀಸರು ಅವರನ್ನು ಸುತ್ತುವರೆದರು. ಈ ವೇಳೆ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭೋಲಾ ಮತ್ತು ಆತನ ಸಹಚರರು ಸಾವನ್ನಪ್ಪಿದರು. ತನ್ನ ಸ್ನೇಹಿತನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಭೋಲಾ ಜಾಟ್‌ನ ಆಸೆ ಈಡೇರಲಿಲ್ಲ. ಭೋಲಾ ಸಾವಿನ ನಂತರ ಉತ್ತರ ಪ್ರದೇಶ ಮಾತ್ರವಲ್ಲದೆ ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶದ ಪೊಲೀಸರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.