ಲಖನೌ(ಉತ್ತರಪ್ರದೇಶ): ಯಾವುದೇ ಹೊಸ ಮದರಸಾಗಳಿಗೆ ಅನುದಾನ ನೀಡದಿರಲು ಉತ್ತರಪ್ರದೇಶ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ನಿಗದಿಗಿಂತ ಒಂದು ದಿನ ಮೊದಲೇ ನಡೆದ ಉತ್ತರಪ್ರದೇಶದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಉತ್ತರಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಈ ವಿಷಯ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಮದರಸಾಗಳಿಗೆ ಯಾವುದೇ ತೊಂದರೆ ಇಲ್ಲ, ಆ ಮದರಸಾಗಳು ಸರ್ಕಾರದಿಂದ ಅನುದಾನ ಪಡೆದುಕೊಳ್ಳಲಿವೆ. ಆದರೆ ಹೊಸದಾಗಿ ಆರಂಭವಾಗುವ ಮದರಸಾಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬಿಜೆಪಿ ಆಡಳಿತವಿರುವ ರಾಜ್ಯದ ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಈ ನಿರ್ಧಾರದ ಹಿಂದಿನ ನಿರ್ಧಾರಕ್ಕೆ ಸಚಿವರು ಇದೇ ವೇಳೆ ಕಾರಣವನ್ನೂ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 560 ಮದರಸಾಗಳು ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿವೆ ಎಂದರು.
ಈಗಾಗಲೇ ಬಹಳಷ್ಟು ಮದರಸಾಗಳಿದ್ದು, ಅಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವತ್ತ ಸರ್ಕಾರ ಗಮನ ಹರಿಸಲಿದೆ. ಆದ್ದರಿಂದ ಈಗ ಈ ಪಟ್ಟಿಗೆ ಯಾವುದೇ ಹೊಸ ಮದರಸಾವನ್ನು ಸೇರಿಸಲಾಗುವುದಿಲ್ಲ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಒಟ್ಟು 16,461 ಮದರಸಾಗಳಿದ್ದು, ಈ ಪೈಕಿ 560 ಸರಕಾರದ ಅನುದಾನ ಪಡೆಯುತ್ತಿವೆ.
ಸರ್ಕಾರದ ನಿರ್ಧಾರ ಸ್ವಾಗತಿಸಿದ ರಾಜ್ಯ ಹಜ್ ಸಮಿತಿ ಅಧ್ಯಕ್ಷ: ಏತನ್ಮಧ್ಯೆ, ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಮತ್ತು ಮಾಜಿ ರಾಜ್ಯ ಸಚಿವ ಮೊಹ್ಸಿನ್ ರಜಾ ಅವರು ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹಿಂದಿನ ಸರಕಾರಗಳು ಮದರಸಾಗಳಿಗೆ ಮಾನ್ಯತೆ ನೀಡಿ ಅನುದಾನ ಪಟ್ಟಿಗೆ ಸೇರಿಸಿದ್ದರೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದಿನ ಎಸ್‌ಪಿ ಮತ್ತು ಬಿಎಸ್‌ಪಿ ಸರಕಾರಗಳು ಮದರಸಾಗಳನ್ನು ಅನುದಾನ ಪಟ್ಟಿಯಲ್ಲಿ ಸೇರಿಸಿ ತಮಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮದರಸಾ ಶಿಕ್ಷಣಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಇದೇ ವೇಳೆ ರಜಾ ಆರೋಪಿಸಿದರು.
ಇದನ್ನು ಓದಿ:ನಮ್ಮ ಸಂಸಾರ ಆನಂದ ಸಾಗರ... ಒಂದೇ ಕುಟುಂಬದಲ್ಲಿದ್ದಾರೆ 62 ಮಂದಿ.. ಈಗಲೂ ಸಹಜೀವನ!