ಮಿರ್ಜಾಪುರ, ಉತ್ತರಪ್ರದೇಶ: ಉತ್ತರ ಪ್ರದೇಶದ ಶಿಕ್ಷಣ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದು ರಾಜ್ಯದ ಸರ್ಕಾರಿ ಶಾಲೆಗಳಿಂದಲೇ ಗೊತ್ತಾಗುತ್ತದೆ. ಒಂದು ಕಡೆ ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿರಲ್ಲ ಮತ್ತು ಇನ್ನೊಂದು ಕಡೆ ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ. ಆದರೆ, ಮಿರ್ಜಾಪುರದಲ್ಲಿ ಶಿಕ್ಷಕರಾಗಲೀ ಅಥವಾ ವಿದ್ಯಾರ್ಥಿಗಳಾಗಲೀ ಇಲ್ಲದ ಶಾಲೆಯೊಂದಿದೆ. ಆದರೂ ಈ ಶಾಲೆ ಸಮಯಕ್ಕೆ ಸರಿಯಾಗಿ ತೆರೆಯುತ್ತದೆ ಮತ್ತು ಸಮಯಕ್ಕೆ ಮುಚ್ಚುತ್ತದೆ.
ಮಿರ್ಜಾಪುರದಲ್ಲೊಂದು ವಿಶಿಷ್ಟ ಶಾಲೆ: ಉತ್ತರ ಪ್ರದೇಶದ ಮಿರ್ಜಾಪುರ ನಾರಾಯಣಪುರ ಬ್ಲಾಕ್‌ನ ಕೊಲ್ನಾ ಗ್ರಾಮದ ಶಾಲೆಯಲ್ಲಿ 2017 ರಲ್ಲಿ 12 ವಿದ್ಯಾರ್ಥಿನಿಯರು ಮತ್ತು ಒಬ್ಬ ಶಿಕ್ಷಕಿ ಇದ್ದರು. ಶಿಕ್ಷಕರ ನಿವೃತ್ತಿಯ ನಂತರ ವಿದ್ಯಾರ್ಥಿನಿಯರೂ ಬರುವುದನ್ನು ನಿಲ್ಲಿಸಿದರು. ಆದರೂ, ಪ್ರತಿ ದಿನ ಶಾಲೆಯಲ್ಲಿ ನಿಯೋಜನೆಗೊಂಡಿರುವ ಇಬ್ಬರು ನೌಕರರು ಬಂದು ಸ್ವಚ್ಛತೆ ಮಾಡಿ ಇಡೀ ದಿನ ತಮ್ಮ ಕಾರ್ಯ ಮುಗಿಸಿ ಸಂಜೆ ಮನೆಗೆ ಮರಳುತ್ತಾರೆ.
ಈ ಸರ್ಕಾರಿ ಕಿರಿಯ ಪ್ರೌಢಶಾಲೆಯನ್ನು 59 ವರ್ಷಗಳ ಹಿಂದೆ ತೆರೆಯಲಾಗಿದೆ. ಆ ಭಾಗದ ಹೆಣ್ಣುಮಕ್ಕಳನ್ನು ಶಿಕ್ಷಣದೊಂದಿಗೆ ಸಂಪರ್ಕಿಸುವ ಮೂಲಕ ಅವರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಅಂದಿನ ಶಿಕ್ಷಣ ಕ್ಷೇತ್ರದಲ್ಲಿ ಗಟ್ಟಿಯಾದ ಹಿಡಿತವನ್ನು ಹೊಂದಿದ್ದ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಕುಮಾರ್ ಸಿಂಗ್ ಅವರು ಸರ್ಕಾರಿ ಶಾಲೆ ತೆರೆಯಲು ತಮ್ಮ 6 ಬಿಘಾ ಭೂಮಿಯನ್ನು ನೀಡಿದ್ದರು. 1952 ಮತ್ತು 1980 ರ ನಡುವೆ ಅನೇಕ ಬಾರಿ ರಾಜ್‌ಗಢ ಮತ್ತು ಚುನಾರ್ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿದ್ದ ಕೃಷ್ಣ ಕುಮಾರ್ ಸಿಂಗ್ ಅವರ ಸೋದರಸಂಬಂಧಿ ರಾಜ್ ನಾರಾಯಣ ಸಿಂಗ್ ಅವರ ಸಹಕಾರದೊಂದಿಗೆ ಸರ್ಕಾರಿ ಕಿರಿಯ ಪ್ರೌಢಶಾಲೆಯನ್ನು 1963 ರಲ್ಲಿ ಸ್ಥಾಪಿಸಲಾಯಿತು.
ಶಾಲೆಗೆ ಆರು ಬಿಘಾ ಭೂಮಿ ದಾನ: ಸರಕಾರಿ ಕಿರಿಯ ಪ್ರೌಢಶಾಲೆ ಕೊಲ್ನಾ ಸುಮಾರು 6 ಬಿಘಾ ಜಾಗದಲ್ಲಿ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದ ನಂತರ ವೈದ್ಯರು ಮತ್ತು ಶಿಕ್ಷಕರ ಸ್ಥಾನವನ್ನು ಪಡೆದಿದ್ದಾರೆ. 2017ನೇ ಸಾಲಿನಲ್ಲಿ ಶಾಲಾ ಶಿಕ್ಷಕಿ ರಮೇಶ್ವರಿ ದೇವಿ ಅವರು ಮುಖ್ಯೋಪಾಧ್ಯಾಯರ ಹುದ್ದೆಯಿಂದ ನಿವೃತ್ತರಾದ ಬಳಿಕ ಯಾವುದೇ ಶಿಕ್ಷಕರನ್ನು ನೇಮಿಸಿರಲಿಲ್ಲ. ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿನಿಯರೂ ಶಾಲೆಗೆ ಬರುವುದನ್ನು ನಿಲ್ಲಿಸಿದ್ದಾರೆ. ಆದರೂ ಪ್ರತಿದಿನ ಶಾಲೆ ತೆರೆದು ಸ್ವಚ್ಛತೆ ಕೂಡ ಮಾಡಲಾಗುತ್ತಿದೆ. ಇದರ ಜವಾಬ್ದಾರಿಯು ರಾಮಚಂದ್ರ ದೀಕ್ಷಿತ್ ಮತ್ತು ಶಕೀಲಾ ಅವರ ಮೇಲಿದೆ.
ಶಿಥಿಲಗೊಂಡ ಶಾಲಾ ಕಟ್ಟಡ: ನಿರ್ವಹಣೆ ಕೊರತೆಯಿಂದ 59 ವರ್ಷ ಹಳೆಯ ಕಟ್ಟಡವೂ ಶಿಥಿಲಗೊಳ್ಳಲು ಆರಂಭಿಸಿದೆ. ಶಿಕ್ಷಕಿ ರಮೇಶ್ವರಿ ದೇವಿ ನಿವೃತ್ತರಾದ ನಂತರ ಮಕ್ಕಳೂ ಶಾಲೆಗೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಅಂದಿನಿಂದ ಶಾಲೆಗೆ ಯಾವುದೇ ಮಕ್ಕಳು ದಾಖಲಾಗಿಲ್ಲ. ಇದರೊಂದಿಗೆ ಗ್ರಾಮಸ್ಥರು ಸಹ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಸರಕಾರಕ್ಕೆ ದೂರು ಕೊಟ್ಟರೂ ಪ್ರಯೋಜನವಿಲ್ಲ: ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾಮಸ್ತ ಸತ್ಯೇಂದ್ರಕುಮಾರ್ ಸಿಂಗ್ ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಹಲವು ಬಾರಿ ಪತ್ರ ಬರೆದರೂ ಇಲಾಖೆಯಲ್ಲಿ ಕುಳಿತಿರುವ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಶಾಲೆಯಲ್ಲಿ ಉತ್ತಮ ಶಿಕ್ಷಣವಿತ್ತು, ಗ್ರಾಮದ ಅನೇಕ ವಿದ್ಯಾರ್ಥಿನಿಯರು ಇಲ್ಲಿ ಓದಿದ ನಂತರ ಉದ್ಯೋಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಬೃಹತ್ ಪ್ರಾಂಗಣದ ಮಧ್ಯದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ನಿರ್ವಹಣೆ ಕೊರತೆಯಿಂದ ಈಗ ಪಾಳು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆಯನ್ನು ಮೇಲ್ದರ್ಜೆಗೆ ಏರಿಸಲು ಆಗ್ರಹ: ಇಲ್ಲಿ ದೊಡ್ಡ ದೊಡ್ಡ ನಾಯಕರ ಹೆಲಿಕಾಪ್ಟರ್ಗಳು ಬಂದಿಳಿಯುತ್ತಿದ್ದವು. ಶಾಲೆಯ ಗಡಿಗೋಡೆಯಿಂದ ಕಟ್ಟಡ, ಉದ್ಯಾನವನದವರೆಗೆ ಎಲ್ಲವೂ ನಿಧಾನವಾಗಿ ಶಿಥಿಲಗೊಳ್ಳುತ್ತಿದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ಅದರ ಹೆಸರೇ ಅಳಿಸಿ ಹೋಗಲಿದೆ. ಈ ಶಾಲೆಯನ್ನು ಮೇಲ್ದರ್ಜೆಗೇರಿಸಿ. ಈ ಕಟ್ಟಡ ಮತ್ತು ಜಮೀನನ್ನು ಟ್ರಾಮಾ ಸೆಂಟರ್ ಆಸ್ಪತ್ರೆ ಮಾಡಲು ಬಳಸಬೇಕು. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಶಾಲೆಯಲ್ಲಿ ನಾಲ್ಕನೇ ತರಗತಿಯ ಇಬ್ಬರು ನೌಕರರು: ಶಿಕ್ಷಕರನ್ನು ನೇಮಿಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎನ್ನುತ್ತಾರೆ ಶಾಲೆಯಲ್ಲಿ ನಿಯೋಜನೆಗೊಂಡ 4ನೇ ತರಗತಿ ನೌಕರ ರಾಮಚಂದ್ರ ದೀಕ್ಷಿತ್. 2017ರಲ್ಲಿ ಶಿಕ್ಷಕರು ನಿವೃತ್ತಿಯಾದ ನಂತರ ಇಲ್ಲಿ ನೇಮಕಾತಿ ನಡೆದಿಲ್ಲ, ಮಕ್ಕಳೂ ಬರುತ್ತಿಲ್ಲ. ನಾವಿಬ್ಬರು ಉದ್ಯೋಗಿಗಳು, ಸಮಯಕ್ಕೆ ಸರಿಯಾಗಿ ಬಂದು ಕರ್ತವ್ಯ ನಿರ್ವಹಿಸುತ್ತೇವೆ. ಶಾಲೆಯನ್ನು ನೋಡಿಕೊಳ್ಳುವುದು ನಮ್ಮ ಕೆಲಸ. ನಾವು ಅದನ್ನು ಚೆನ್ನಾಗಿ ಮಾಡುತ್ತಿದ್ದೇವೆ. ನಮಗೆ ಕೆಲಸ ಇರುವವರೆಗೆ ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆ ಎಂದರು.
ಶಿಕ್ಷಣಾಧಿಕಾರಿ ಹೇಳುವುದು ಹೀಗೆ: ವಿಷಯ ಗಮನಕ್ಕೆ ಬಂದಿದ್ದು, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಅನಿಲ್‌ಕುಮಾರ್ ವರ್ಮಾ ತಿಳಿಸಿದ್ದಾರೆ.
ಓದಿ: ಸ್ಕ್ರ್ಯಾಪ್ ವಸ್ತುಗಳ ಬಳಕೆ.. ಐಟಿಐ ವಿದ್ಯಾರ್ಥಿಗಳ ಕೈಗಳಿಂದ ಅರಳಿದ ವಿಂಟೇಜ್ ಮಾಡೆಲ್ ಬೈಕ್ಗಳು!!