ಶಹಜಹಾನ್ಪುರ(ಉತ್ತರ ಪ್ರದೇಶ): 25 ವರ್ಷದ ಯುವಕ ಹಾಗೂ 21 ವರ್ಷದ ಯುವತಿಯೋರ್ವಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಕುಟುಂಬದ ಸದಸ್ಯರೇ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಮೃತರನ್ನು ಆಶಿಶ್ ಕುಮಾರ್ ಹಾಗೂ ಬಂಟಿ ಎಂದು ಗುರುತಿಸಲಾಗಿದೆ.
ಶಹಜಹಾನ್ಪುರ್ ಜಿಲ್ಲೆಯ ಗಡಿಯಾ ರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಮಹಿಳೆಯ ಮನೆಯಿಂದ 150 ಮೀಟರ್ ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಯುವತಿ ಬಂಟಿಯ ಮೃತದೇಹ ಆಕೆಯ ಮನೆಯ ಎರಡನೇ ಮಹಡಿಯಲ್ಲಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವತಿಯ ಕುಟುಂಬದ ಸದಸ್ಯರು ಇಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಘಟನೆ ನಡೆದ ಬಳಿಕ ಯುವತಿಯ ಮನೆಯ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಯುವಕನ ತಂದೆ ಮಹಿಳೆ ಕುಟುಂಬದ ಮೇಲೆ ಆರೋಪ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್, ಆಶಿಶ್ ಈಗಾಗಲೇ ಮದುವೆಯಾಗಿ ಮಗುವಿನ ತಂದೆಯಾಗಿದ್ದಾನೆ. ಯುವತಿ ಬಂಟಿಯ ಮದುವೆ ನಿಶ್ಚಯವಾಗಿತ್ತು. ಆದರೆ ಕಳೆದ ಆರು ವರ್ಷಗಳಿಂದ ಇಬ್ಬರು ಸಂಬಂಧದಲ್ಲಿದ್ದರು. ಇವರ ಪ್ರೇಮದ ಬಗ್ಗೆ ಗೊತ್ತಾದ ಬಳಿಕ ಎರಡು ಕುಟುಂಬದ ಮಧ್ಯೆ ಜಗಳ ಸಹ ನಡೆದಿತ್ತು ಎಂದಿದ್ದಾರೆ. ಇದೀಗ ಅವರ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.