ಸೌರಾಷ್ಟ್ರ (ಗುಜರಾತ್): ಆಹಾರ ದುಬಾರಿಯಾಗುತ್ತಿರುವ ಈ ಕಾಲದಲ್ಲೂ ಗುಜರಾತ್ನ ಮೆಟ್ರೋಪಾಲಿಟನ್ ನಗರ ರಾಜ್ ಕೋಟ್ನಲ್ಲಿ ಗಾಂಥಿಯಾವನ್ನು ಕೇವಲ ಐದು ರೂಪಾಯಿಗೆ ನೀಡಲಾಗುತ್ತಿದೆ. ಗಾಂಥಿಯಾ ಬೆಳಗಿನ ಉಪಹಾರವಾಗಿ ಸೇವಿಸುವ ಗುಜರಾತಿ ಖಾದ್ಯ. ಗುಜರಾತ್ನ ಸೌರಾಷ್ಟ್ರ ಪ್ರಾಂತ್ಯದಲ್ಲಿ ತೆರೆಯಲಾದ ಉಪಹಾರ ಕೇಂದ್ರವೊಂದರಲ್ಲಿ ಈ ಗಾಂಥಿಯಾವನ್ನು 5 ರೂಪಾಯಿಗೆ ನೀಡುವುದಲ್ಲದೇ, ಅದರ ಜೊತೆಗೆ ಚಹಾ ಕೂಡ ನೀಡಲಾಗುತ್ತದೆ. ಈ ಉಪಹಾರ ಕೇಂದ್ರವನ್ನು ಎನ್‌ಜಿಒ ಒಂದು ನಡೆಸುತ್ತಿದೆ.
ಸೌರಾಷ್ಟ್ರದ ಮೆಟ್ರೋಪಾಲಿಟನ್ ನಗರ ರಾಜ್‌ಕೋಟ್‌ನಲ್ಲಿ ಮಾವಡಿ ಚೌಕ್ ಪ್ರದೇಶದಲ್ಲಿ ತೆರೆದಿರುವ ಉಪಹಾರ ಕೇಂದ್ರದಲ್ಲಿ ಅನಿಯಮಿತ ಗಾಂಥಿಯಾ ಕೇವಲ ಐದು ರೂಪಾಯಿಗಳಿಗೆ ಲಭ್ಯವಿದೆ. ಅಷ್ಟೇ ಅಲ್ಲ, ಅನಿಯಮಿತ ಚಹಾ ಮತ್ತು ಸಲಾಡ್‌ಗಳು ಸಹ ಲಭ್ಯವಿವೆ. ಆದರೆ ಈ ಆಫರ್ ಹಿರಿಯ ನಾಗರಿಕರಿಗೆ ಮಾತ್ರ. ಒಂದು ವೇಳೆ ತಿಂಡಿ ತಿನ್ನಲು ಬಂದ ಹಿರಿಯ ನಾಗರಿಕರ ಬಳಿ ಹಣ ಇಲ್ಲದಿದ್ದರೆ, ಅವರಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತದೆ.
ಎನ್‌ಜಿಒ ನಡೆಸುತ್ತಿರುವ ಟ್ರಸ್ಟಿ ಮನ್‌ಸುಖ್‌ಭಾಯ್ ಮಾತನಾಡಿ, ಶನಿವಾರ ಮತ್ತು ಭಾನುವಾರದಂದು 300ಕ್ಕೂ ಹೆಚ್ಚು ಜನರು ಇಲ್ಲಿಗೆ ಗಾಂಥಿಯಾ ತಿನ್ನಲು ಬರುತ್ತಾರೆ. ಪ್ರತಿದಿನ 50 ಕೆ.ಜಿ ಹಿಟ್ಟಿನ ಗಾಂಥಿಯಾ ಮಾಡಲಾಗುತ್ತದೆ. ಅವುಗಳ ಜೊತೆಗೆ ಜಿಲೇಬಿ, ಟೀ ಕೂಡ ನೀಡಲಾಗುತ್ತದೆ. ಮೆಣಸಿನಕಾಯಿ ಬಜ್ಜಿ, ಸಲಾಡ್ ಕೂಡ ನೀಡಲಾಗುತ್ತದೆ. ತಮ್ಮ ಮನೆಯ ವ್ಯಾಪ್ತಿ ಬಿಟ್ಟು ಹೊರಗಡೆ ಬರಲಾಗದವರಿಗೂ, ಅವರಿದ್ದಲ್ಲಿಗೆ ಟಿಫಿನ್ ಸೇವೆ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲೂ ಅತ್ಯಂತ ಕಡಿಮೆ ದರದಲ್ಲಿ ಉಪಹಾರ ನೀಡುವ ಸೇವೆಯನ್ನು ನಮ್ಮ ಎನ್‌ಜಿಒ ಟ್ರಸ್ಟ್ ಮಾಡುತ್ತಿದೆ. ಮುಂಬರುವ 2025 ರ ವೇಳೆಗೆ, ನಾವು ಹೆಚ್ಚು ಹೆಚ್ಚು ವೃದ್ಧರು ಮತ್ತು ಹಿರಿಯ ನಾಗರಿಕರಿಗಾಗಿ 50ಕ್ಕೂ ಹೆಚ್ಚು ಗಾಂಥಿಯಾ ಕೇಂದ್ರಗಳನ್ನು ತೆರೆಯಲಿದ್ದೇವೆ. ನಮ್ಮ ಟಿಫಿನ್ ಸೇವೆಯು ರಾಜ್‌ಕೋಟ್ ಸುತ್ತಮುತ್ತಲಿನ 300 ಹಳ್ಳಿಗಳಿಗೆ ಹೋಗುತ್ತದೆ ಎಂದು ಹೇಳಿದರು.
ನಿರ್ಗತಿಕರಿಗೆ ಕೇವಲ 5 ರೂ.ಗೆ ಬೆಳಗಿನ ಉಪಹಾರ ನೀಡಲಾಗುತ್ತದೆ. ಒಂದೂವರೆ ವರ್ಷಗಳ ಹಿಂದೆ ಈ ಕೇಂದ್ರವನ್ನು ಆರಂಭಿಸಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಂಡಿದ್ದು, ಬೆಳಗಿನ ಉಪಹಾರ ಮಾತ್ರವಲ್ಲದೇ ಮಧ್ಯಾಹ್ನದ ಊಟವನ್ನೂ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ ಕೇವಲ ಐದು ರೂಪಾಯಿಗೆ ಗಾಂಥಿಯಾವನ್ನು ತಿನ್ನಲು ಜನ ಬರುತ್ತಾರೆ ಎಂದು ತಿಳಿಸಿದರು.
ಆಹಾರ ಸೇವಿಸಲು ಬಂದ ಲಕ್ಷ್ಮಣ ಭಾಯ್ ಮಾತನಾಡಿ, ಕಳೆದ ಒಂದು ವರ್ಷದಿಂದ ಇಲ್ಲಿಯೇ ಉಪಹಾರ ಸೇವಿಸುತ್ತಿದ್ದೇನೆ. ತುಂಬಾ ಚೆನ್ನಾಗಿದೆ. ಇತರ ಅಂಗಡಿಗಳಲ್ಲಿ ಗಾಂಥಿಯಾ ಕೆಜಿಗೆ 300 ರೂ., ಆದರೆ, ಇಲ್ಲಿ ಜಿಲೇಬಿ ಮತ್ತು ಚಹಾದ ಜೊತೆಗೆ ಕೇವಲ ಐದು ರೂಪಾಯಿಗೆ ಇಲ್ಲಿ ತಿನ್ನಬಹುದು. 300 ಕ್ಕೂ ಹೆಚ್ಚು ಜನರು ಇಲ್ಲಿಗೆ ಗಾಂಥಿಯಾ ತಿನ್ನಲು ಬರುತ್ತಾರೆ. ಮತ್ತು ಇಲ್ಲಿ 5 ರೂಪಾಯಿಗೆ ಉಪಹಾರ ನೀಡುವುದಲ್ಲದೇ ಇಲ್ಲಿನ ಸ್ವಯಂಸೇವಕರು ಅವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ನೈರುತ್ಯ ರೈಲ್ವೆ ಮತ್ತೊಂದು ಮಹತ್ವದ ಹೆಜ್ಜೆ.. ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ ಪದಾರ್ಥ ವಿತರಣೆ