ಪೂರ್ಣಿಯಾ(ಬಿಹಾರ): ಕುಟುಂಬ ಸದಸ್ಯರು ಪರಸ್ಪರ ಬೇರೆ ಬೇರೆಯಾಗುವ ಸಂದರ್ಭದಲ್ಲಿ ಮನೆ, ಭೂಮಿ, ಚಿನ್ನಾಭರಣ ಹಾಗೂ ಹಣವನ್ನು ಪಾಲು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ವಿಚಿತ್ರ ಪ್ರಕರಣದಲ್ಲಿ ಇಬ್ಬರು ಹೆಂಡತಿಯರು ಕಟ್ಟಿಕೊಂಡ ಗಂಡನನ್ನು ಪರಸ್ಪರ ಶೇರ್ ಮಾಡಿಕೊಂಡಿದ್ದಾರೆ. ಬಿಹಾರದ ಪೂರ್ಣಿಯಾ ಎಂಬಲ್ಲಿ ಈ ಘಟನೆ ನಡೆದಿದೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬುದು ಗಾದೆ ಮಾತು. ಆದರೆ, ಇಲ್ಲಿ ಬಡವಾಗಿರುವುದು ಕೂಸು ಅಲ್ಲ, ಗಂಡ ಎನ್ನಬಹುದೇನೋ. ಭವಾನಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಯಾರಿ ಗ್ರಾಮದ ನಿವಾಸಿ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು, ಆರು ಮಕ್ಕಳ ತಂದೆಯಾಗಿದ್ದಾನೆ. ಇದರ ಮಧ್ಯೆ ಬೇರೊಬ್ಬ ಮಹಿಳೆಯನ್ನೂ ಆತ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾನೆ. ಎರಡನೇ ಹೆಂಡ್ತಿಗೂ ಹೆಣ್ಣು ಮಗುವಿದೆ. ಗಂಡ ಈಗಾಗಲೇ ಮದುವೆಯಾಗಿರುವ ವಿಷಯ ಎರಡನೇ ಹೆಂಡತಿಗೆ ಗೊತ್ತಾಗಿದೆ. ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರ ಬೆನ್ನಲ್ಲೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.
ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ: ಪ್ರಧಾನಿ ಮಧ್ಯಸ್ಥಿಕೆಗೆ ಕೈ ಸಂಸದರ ಆಗ್ರಹ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕೌನ್ಸಿಲಿಂಗ್ ನಡೆಸಲು ಎಲ್ಲರನ್ನೂ ಕರೆಸಲಾಗಿದೆ. ಈ ವೇಳೆ ಇಬ್ಬರು ಪತ್ನಿಯರೊಂದಿಗೆ ಮಾತುಕತೆ ನಡೆಸಿದ ಬಳಿಕ, ಪೊಲೀಸ್ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಮೊದಲ ಹೆಂಡತಿ ಜೊತೆ 15 ದಿನ ಎರಡನೇ ಹೆಂಡತಿ ಜೊತೆ 15 ದಿನ ಉಳಿದುಕೊಳ್ಳುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆಂದು ಹಿರಿಯ ವಕೀಲ ದಿಲೀಪ್ ಕುಮಾರ್ ತಿಳಿಸಿದರು.
ಈ ಒಪ್ಪಂದಕ್ಕೆ ಬಾಂಡ್ ಮೇಲೆ ಸಹಿ ಮಾಡಿಸಿಕೊಳ್ಳಲಾಗಿದೆ. ಪತಿಯು ಮೊದಲ ಪತ್ನಿ ಜೊತೆ 15 ದಿನಗಳು ಹಾಗೂ ಎರಡನೇ ಹೆಂಡತಿ ಜೊತೆ 15 ದಿನಗಳ ಕಾಲ ವಾಸ ಮಾಡಬೇಕು. ಇಬ್ಬರೂ ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುವಂತೆ ಸೂಚನೆ ನೀಡಲಾಗಿದೆ.