ನವದೆಹಲಿ : ಕಾಂಗ್ರೆಸ್ ಪಕ್ಷವು ಮಂಗಳವಾರ ಸಾಮಾಜಿಕ ಮಾಧ್ಯಮದ ದೈತ್ಯ ಟ್ವಿಟರ್‌ಗೆ ಪತ್ರವೊಂದನ್ನು ಕಳುಹಿಸಿದೆ. ಆಪಾದಿತ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಹಲವಾರು ಕೇಂದ್ರ ಸಚಿವರ ಟ್ವೀಟ್ ಲಿಂಕ್‌ಗಳನ್ನು ಹಂಚಿಕೊಂಡಿದ್ದು, ಆ ಟ್ವೀಟ್‌ಗಳಲ್ಲಿ ತಿರುಚಿದ ಮಾಧ್ಯಮ ಎಂಬ ಲೋಗೋ ಹಾಕಲು ಸಂಸ್ಥೆಯನ್ನು ಒತ್ತಾಯಿಸಿದೆ.
ಕಾಂಗ್ರೆಸ್ ಟೂಲ್ಕಿಟ್ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಕೋಶವು ದೆಹಲಿ ಮತ್ತು ಗುರಗಾಂವ್‌ನ ಟ್ವಿಟರ್ ಕಚೇರಿಗಳಿಗೆ ಭೇಟಿ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಕಾಂಗ್ರೆಸ್ ಮುಖ್ಯ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವಿಟರ್ನ ಕಾನೂನು ಉಪಾಧ್ಯಕ್ಷ ವಿಜಯ ಗಡ್ಡೆ ಅವರಿಗೆ ಪತ್ರ ಬರೆದಿದ್ದು, ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ಹರಡಿದ್ದಕ್ಕಾಗಿ ಮೋದಿ ಸರ್ಕಾರದ ಕೇಂದ್ರ ಸಚಿವರ ಟ್ವೀಟ್‌ಗಳಿಗೆ ಈ ತಿರುಚಿದ ಮಾಧ್ಯಮ ಟ್ಯಾಗ್ ಹಾಕಬೇಕೆಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಬರೆದ ಹಿಂದಿನ ಪತ್ರವನ್ನು ಸುರ್ಜೇವಾಲಾ ಅವರು ಉಲ್ಲೇಖಿಸಿದ್ದು, ಅಪಾಯಕಾರಿ, ಸುಳ್ಳು ಮತ್ತು ಕಲ್ಪಿತ ಮಾಹಿತಿ ಹರಡುವ ಮೂಲಕ ಅನಗತ್ಯ ಮತ್ತು ರಾಜಕೀಯ ಲಾಭ ಪಡೆಯಲು ಕೆಲ ಬಿಜೆಪಿ ನಾಯಕರು ಹೊಂಚು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ಅವರು ಕೇಂದ್ರ ಸಚಿವರಾದ ಶಾಂಡಿಲ್ಯ ಗಿರಿರಾಜ್ ಸಿಂಗ್, ಪಿಯೂಷ್ ಗೋಯಲ್, ಸ್ಮೃತಿ ಜುಬಿನ್ ಇರಾನಿ, ರವಿಶಂಕರ್ ಪ್ರಸಾದ್, ಪ್ರಲ್ಹಾದ್ ಜೋಶಿ, ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ತವಾರ್ಚಂದ್ ಗೆಹ್ಲೋಟ್, ಡಾ. ಹರ್ಷವರ್ಧನ್, ಮುಖ್ಖ್ವರ್ನ್ ಸಿಂಗ್ ಶೇಖಾವತ್ ಹೀಗೆ ಮುಂತಾದವರ ಟ್ವೀಟ್ಗಳನ್ನು ಶೇರ್ ಮಾಡಿದ್ದಾರೆ.
ತಿರುಚಿದ, ಕಲ್ಪಿತ ವಿಷಯಗಳು ಮತ್ತು #CongressToolkitExposed ಹ್ಯಾಷ್ ಟ್ಯಾಗ್ ಅಡಿಯಲ್ಲಿ ಮಾಡಿರುವ ಟ್ವೀಟ್‌ಗಳಿಗೆ ಈಗಾಗಲೇ 'ತಿರುಚಿದ ಮಾಧ್ಯಮ' ಎಂಬ ಮುದ್ರೆಯನ್ನು ಟ್ವಿಟರ್ ಹಾಕಿದೆ ಎಂದಿದ್ದಾರೆ.
ಭಾರತ ಸರ್ಕಾರದ ಕೇಂದ್ರ ಸಚಿವರು ನೇರವಾಗಿ ಅವರ / ಅವಳ ಅಧಿಕೃತ / ಪರಿಶೀಲಿಸಿದ ಟ್ವಿಟರ್ ಖಾತೆಯ ಮೂಲಕ ಹಾಕುವ ಯಾವುದೇ ಮಾಹಿತಿಯು 'ನಿಜ' ಎಂದು ಜನರು ನಂಬುತ್ತಾರೆ ಎಂಬುದು ವಾಸ್ತವದ ವಿಷಯ, ಆದ್ದರಿಂದ, ಎಲ್ಲಾ ಟ್ವೀಟ್‌ಗಳಲ್ಲಿ ತಿರುಚಿದ ಮಾಧ್ಯಮ ಲೋಗೋ ಹಾಕಬೇಕು ಎಂದು ಮನವಿ ಮಾಡಿದ್ದಾರೆ.