ನವದೆಹಲಿ: ಗುಜರಾತ್ನಲ್ಲಿ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯೊಂದು ಅಚ್ಚರಿಗೆ ಕಾರಣವಾಗಿದೆ. ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸದ್ಯಕ್ಕೆ ಗುಜರಾತ್ ರಾಜ್ಯಕ್ಕೆ ವೀಕ್ಷಕರಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಇಂದು ಭೇಟಿ ನೀಡಲಿದ್ದಾರೆ.
ಗುಜರಾತ್ ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಸಚಿವರು ಇಂದು ರಾಜ್ಯ ಶಾಸಕಾಂಗ ಪಕ್ಷದೊಂದಿಗೆ ಸಭೆ ನಡೆಸಿ, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ರೂಪಾನಿ ಶನಿವಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ರೂಪಾನಿ ಡಿಸೆಂಬರ್ 2017ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮುಂದಿನ ಸಿಎಂ ಆಯ್ಕೆ ಇಂದೇ ಘೋಷಣೆಯಾಗುವ ಸಾಧ್ಯತೆಯಿದೆ.
ಕೇಂದ್ರ ಸಚಿವ ಅಮಿತ್ ಶಾ ಕೇಂದ್ರ ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಹೇಳಿದ್ದಾರೆ.
ಪಕ್ಷದಲ್ಲಿ ಕೆಲ ಶಾಸಕರು ವಿಜಯ್ ರೂಪಾನಿ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಸ್ಟ್ ತಿಂಗಳಲ್ಲಿ ಅಮಿತ್ ಶಾ ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಹಲವು ಶಾಸಕರು ಸಿಎಂ ರೂಪಾನಿ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರು. ಈ ದೂರಿನ ಬಳಿಕ ರೂಪಾನಿ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಸಿಎಂ ಸ್ಥಾನಕ್ಕೆ ರೂಪಾನಿ ರಾಜೀನಾಮೆ.. 'ಮೃದು ಸ್ವಭಾವ'ವೇ ಅವರ ರಾಜಕೀಯ ಅಂತ್ಯಕ್ಕೆ ಕಾರಣವಾಯ್ತಾ!?