ಭಾಗಲ್ಪುರ (ಬಿಹಾರ): ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಕಿರಿಯ ಸಹೋದರ ನಿರ್ಮಲ್ ಚೌಬೆ ಶುಕ್ರವಾರ ಬಿಹಾರದ ಭಾಗಲ್ಪುರದಲ್ಲಿ ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಇಲ್ಲಿನ ಮಾಯಾಗಂಜ್‌ನಲ್ಲಿರುವ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತುರ್ತು ಚಿಕಿತ್ಸಾ ಘಟಕ (ಐಸಿಯು)ದಲ್ಲಿ ವೈದ್ಯರು ಇರದೇ ಇರುವ ಕಾರಣ ಸೂಕ್ತ ಚಿಕಿತ್ಸೆ ದೊರೆಯದೆ ನಿರ್ಮಲ್ ಚೌಬೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನಿರ್ಮಲ್ ಚೌಬೆ ಆರೋಗ್ಯವು ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ರಕ್ತದೊತ್ತಡ ಹೆಚ್ಚಾಗಿ, ಉಸಿರಾಡಲು ತೊಂದರೆಯಾಗಿತ್ತು. ಈ ಸಮಯದಲ್ಲಿ ನಿರ್ಮಲ್ ಚೌಬೆ ರಕ್ತದ ವಾಂತಿ ಮಾಡಲು ಶುರು ಮಾಡಿದರು. ಇದರಿಂದ ಕ್ಷಣವೇ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ಸಾಗಿಸುವಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ನೇರವಾಗಿ ಐಸಿಯುಗೆ ದಾಖಲಿಸಲಾಯಿತು. ಆದರೆ, ಐಸಿಯು ವಾರ್ಡ್ನಲ್ಲಿ ಯಾವುದೇ ಹಿರಿಯ ವೈದ್ಯರು ಇರಲಿಲ್ಲ. ಆಗ ನರ್ಸ್ಗಳೇ ಅವರಿಗೆ ಚಿಕಿತ್ಸೆ ನೀಡಿದರು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.
ಎರಡು ಗಂಟೆಗಳ ಕಾಲ ನರಳಾಟ ಆರೋಪ: ಹೃದಯಾಘಾತಕ್ಕೆ ಒಳಗಾಗಿ ರಕ್ತದ ವಾಂತಿ ಮಾಡುತ್ತಿದ್ದ ನಿರ್ಮಲ್ ಚೌಬೆ ಅವರನ್ನು ದೊಡ್ಡ ಆಸ್ಪತ್ರೆಯಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಪರಿಸ್ಥಿತಿಯಲ್ಲಿ ಐಸಿಯು ವಾರ್ಡ್ಗೂ ಅವರನ್ನು ದಾಖಲು ಮಾಡಿದ್ದರೂ, ಯಾವುದೇ ವೈದ್ಯರು ಬರಲಿಲ್ಲ. ಕೇಂದ್ರ ಸಚಿವರು ಸಹೋದರ ಎಂದು ಹೇಳಿದರೂ ಆಸ್ಪತ್ರೆಯ ಸಿಬ್ಬಂದಿ ಏನೂ ಮಾಡಲಿಲ್ಲ. ಇದರಿಂದ ಎರಡು ಗಂಟೆಗಳ ಕಾಲ ಅವರು ನರಳಾಡುತ್ತಿದ್ದರು. ಕೊನೆಗೆ ಸಂಜೆ 6.30ರ ಸುಮಾರಿಗೆ ತಮ್ಮ ಕೊನೆಯುಸಿರೆಳೆದರು ಎಂದು ಚೌಬೆ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ನಿರ್ಮಲ್ ಚೌಬೆ ನಿಧನ ನಂತರ ಆಸ್ಪತ್ರೆಯ ಆಡಳಿತ ಮಂಡಳಿದ ವಿರುದ್ಧ ಆಸ್ಪತ್ರೆಯಲ್ಲಿ ಸಂಬಂಧಿಕರು ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ವೈದ್ಯರಿಲ್ಲದೆ ನಡೆಯುತ್ತಿದೆ. ಇಷ್ಟು ದೊಡ್ಡ ಆಸ್ಪತ್ರೆಯು ಕೇವಲ ನರ್ಸ್ಗಳೇ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಕೇಂದ್ರ ಸಚಿವರ ಸಹೋದರ ಆಸ್ಪತ್ರೆಗೆ ದಾಖಲಾದರೂ ಯಾವುದೇ ವೈದ್ಯರು ಬಂದು ಗಮನಿಸಲಿಲ್ಲ. ಆಸ್ಪತ್ರೆಯಲ್ಲಿ ಸಚಿವರ ಸಹೋದರನಿಗೆ ಇಂತಹ ಸ್ಥಿತಿಯಾದರೆ, ಸಾಮಾನ್ಯ ರೋಗಿಗಳ ಸ್ಥಿತಿ ಏನಾಗಬಹುದು ಎಂದು ಮೃತ ನಿರ್ಮಲ್ ಚೌಬೆ ಅವರ ಸಂಬಂಧ ಚಂದನ್ ಚೌಬೆ ಪ್ರಶ್ನಿಸಿದ್ದಾರೆ.
ಐಸಿಯು ವಾರ್ಡ್ನಲ್ಲಿ ವೈದ್ಯರು ಇರಲಿಲ್ಲ - ಆಸ್ಪತ್ರೆಯ ಅಧೀಕ್ಷಕ: ಈ ಕುರಿತು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಅಸೀಂಕುಮಾರ್ ಪ್ರತಿಕ್ರಿಯಿಸಿದ್ದು, ನಿರ್ಮಲ್ ಚೌಬೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಹೃದಯಾಘಾತವಾಗಿರುವುದನ್ನು ಅರಿತು ಆಸ್ಪತ್ರೆಯಲ್ಲಿನ ಇತರ ಹಿರಿಯ ವೈದ್ಯರು ಔಷಧಗಳನ್ನು ನೀಡಿ ಅವರನ್ನು ಐಸಿಯು ವಾರ್ಡ್ಗೆ ಸ್ಥಳಾಂತರಿಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಐಸಿಯು ವಾರ್ಡ್ನಲ್ಲಿ ವೈದ್ಯರು ಇರಲಿಲ್ಲ ಎಂಬುವುದು ನಿಜ. ಇದೇ ವೇಳೆ ಆಸ್ಪತ್ರೆಯ ಕರ್ತವ್ಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ವೈದ್ಯರಾದ ಆದಿತ್ಯ ಮತ್ತು ವಿನಯ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಆಸ್ಪತ್ರೆಯಲ್ಲಿ ಚೌಬೆ ಸಂಬಂಧಿಕರು ಗಲಾಟೆ ಮಾಡಿದ್ದರಿಂದ ಆಸ್ಪತ್ರೆಯಲ್ಲಿದ್ದ ಇತರ ವೈದ್ಯರು ಓಡಿಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಭಾಗಲ್ಪುರ ನಗರ ಡಿಎಸ್ಪಿ ಅಜಯ್ ಕುಮಾರ್ ಚೌಧರಿ ಪ್ರತಿಕ್ರಿಯಿಸಿ, ಆಸ್ಪತ್ರೆಯಲ್ಲಿ ನಡೆದ ಘಟನೆ ಇದುವರೆಗೆ ಯಾವುದೇ ದೂರನ್ನು ಪೊಲೀಸರು ಸ್ವೀಕರಿಸಿಲ್ಲ. ಒಂದು ವೇಳೆ ದೂರು ಬಂದರೆ ಅದರ ತನಿಖೆ ನಡೆಸುತ್ತೇವೆ. ಯಾರೇ ನಿರ್ಲಕ್ಷ್ಯ ವಹಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ತೆಲುಗು ಯುವನಟ ತಾರಕರತ್ನಗೆ ಲಘು ಹೃದಯಾಘಾತ.. ಬೊಮ್ಮಸಂದ್ರದಲ್ಲಿ ಮುಂದುವರಿದ ಚಿಕಿತ್ಸೆ