ಸೂರತ್, ಗುಜರಾತ್: ಹಿಂದಿ ಯಾವುದೇ ಭಾಷೆಗಳಿಗೆ ಪ್ರತಿಸ್ಪರ್ಧಿಯಲ್ಲ. ದೇಶದ ಇತರ ಎಲ್ಲಾ ಪ್ರಾದೇಶಿಕ ಭಾಷೆಗಳ "ಸ್ನೇಹಿತ"ನಿದ್ದಂತೆ. ಭಾಷೆಗಳ ಬೆಳವಣಿಗೆಯು ಪರಸ್ಪರ ಅವಲಂಬಿತವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಸ್ಥಳೀಯ ಭಾಷೆಗಳ ವಿರುದ್ಧ ಹಿಂದಿ ಹೇರಿಕೆಯನ್ನು ಅವರು ಖಂಡಿಸಿದರು. ಹಿಂದಿಯೊಂದಿಗೆ ಸ್ಥಳೀಯ ಭಾಷೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಇದೇ ವೇಳೆ ಹೇಳಿದರು.
ಗುಜರಾತ್ನ ಸೂರತ್ನಲ್ಲಿ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ, ಭಾಷೆಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಅಗತ್ಯವಿದೆ. ಇತರ ಭಾಷೆಗಳ ಪದಗಳನ್ನು ಎರವಲು ಪಡೆಯುವ ಮೂಲಕ ಹಿಂದಿಯ ನಿಘಂಟನ್ನು ವಿಸ್ತರಿಸಬೇಕಿದೆ. ಹಿಂದಿ ಭಾಷೆ ಬೇರೆ ಭಾಷೆಗಳೊಂದಿಗೆ ಹೊಂದಿಕೊಳ್ಳದ ಹೊರತು, ಅದು ಬೆಳೆಯಲು ಸಾಧ್ಯವಿಲ್ಲ ಎಂದು ಶಾ ಅಭಿಪ್ರಾಯಪಟ್ಟರು.
ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಭಾಷೆ ಸ್ಪರ್ಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿ ದೇಶದ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ. ಹಿಂದಿ ದೇಶದ ಎಲ್ಲ ಭಾಷೆಗಳ ಸ್ನೇಹಿತನಿದ್ದಂತೆ. ಹಿಂದಿ ಅಭಿವೃದ್ಧಿಯಾದಲ್ಲಿ ಮಾತ್ರ ಪ್ರಾದೇಶಿಕ ಭಾಷೆಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಹಿಂದಿ ಎಲ್ಲರನ್ನೂ ಒಳಗೊಳ್ಳುವ ಭಾಷೆಯಾಗಿದ್ದು, ಹಿಂದಿಯೊಂದಿಗೆ ಸ್ಥಳೀಯ ಭಾಷೆಗಳನ್ನು ಬಲಪಡಿಸಲು ಕರೆ ನೀಡಿದ ಅಮಿತ್ ಶಾ, ಹಿಂದಿಯಲ್ಲಿ 264, ಉರ್ದುವಿನಲ್ಲಿ 58, ತಮಿಳಿನಲ್ಲಿ 19, ತೆಲುಗಿನಲ್ಲಿ 10, ಪಂಜಾಬಿ ಮತ್ತು ಗುಜರಾತಿಯಲ್ಲಿ ತಲಾ 22, ಮರಾಠಿಯಲ್ಲಿ 123, ಸಿಂಧಿಯಲ್ಲಿ 9, ಒಡಿಯಾದಲ್ಲಿ 11, ಬಾಂಗ್ಲಾದ 24, ಕನ್ನಡದ ಒಂದು ಸಾಹಿತ್ಯ ಕೃತಿಗಳನ್ನು ಬ್ರಿಟಿಷರು ನಿಷೇಧಿಸಿದರು. ಇದಕ್ಕೆ ಕಾರಣ ಆಯಾ ಭಾಷೆಗಳು ಬ್ರಿಟಿಷರ ವಿರುದ್ಧದ ಸಮರವನ್ನು ಭಾಷೆಯ ಆಧಾರದ ಮೇಲೆ ಬಲಪಡಿಸಿದ್ದವು ಎಂದರು.
ವಿದೇಶಿ ಭಾಷೆಗಳ ಬದಲಾಗಿ ಸ್ಥಳೀಯ ಭಾಷೆಗಳ ಚಿಂತನೆ ಆಧಾರದ ಮೇಲೆ ನೀತಿ ನಿರೂಪಣೆ ರೂಪಿಸಬೇಕಾಗಿದೆ. ಹಿಂದಿಯ ನಿಘಂಟು ವಿಸ್ತರಿಸಿ ಅದು ದೇಶ, ವಿದೇಶಗಳಲ್ಲಿ ಪಸರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಓದಿ: ಮಾಜಿ ಸಂಸದೆ ಕೊತಪಲ್ಲಿ ಗೀತಾಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್